ಬೆಂಗಳೂರು: ಸಮಾಜದಲ್ಲಿ ಗೌರವಾನ್ವಿತವಾಗಿ ಬದುಕಲು ವ್ಯಕ್ತಿಯ ನಡೆ-ನುಡಿ ಹಾಗೂ ಸಿದ್ಧಾಂತ ಒಂದಾಗಿರಬೇಕು. ಆಗ ಮಾತ್ರ ಜನರು ಲೇಖಕರು ಬರೆದದ್ದು, ಕಲಾವಿದರು ನಟಿಸಿದದ್ದು ನಂಬುತ್ತಾರೆ ಎಂದು ಹಿರಿಯ ಸಾಹಿತಿ ಹಾಗೂ ಕೃಷಿ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ಹೇಳಿದರು.

ನಗರದಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನಡೆದ ಅವರ 80ನೇ ವರ್ಷದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ಮಾನವೀಯ ಸಂಬಂಧಗಳು ನಿಧಾನವಾಗಿ ಮರೆಯಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ರಾಜಕೀಯ ಹಾಗೂ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳು ಅಧಃಪತನದ ದಾರಿಯಲ್ಲಿ ಸಾಗುತ್ತಿದ್ದು, ನಡೆ-ನುಡಿಯಲ್ಲಿ ನಂಬಿಕೆ ಕಳೆದುಹೋಗಿದೆ ಎಂದು ವಿಷಾದಿಸಿದರು. ಬಸವಣ್ಣ, ಗಾಂಧಿ, ವಿವೇಕಾನಂದರ ಕಾಲದಂತೆ ನಂಬಿಕೆ ಉಳಿದಿಲ್ಲ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಾಡೋಜ ಅವರು, ಕನ್ನಡ ಸಾಹಿತ್ಯದ ಬೆಳವಣಿಗೆಗೆ ಸಂಗೀತ ಮತ್ತು ವಿವಿಧ ಕಲೆಗಳು ಪೂರಕವಾಗಿವೆ. ಇಂದಿನ ಜೀವನದಲ್ಲಿ ಸೌಂದರ್ಯ ಮತ್ತು ಸಂತೋಷವನ್ನು ಕಲೆಗಳು ಹೆಚ್ಚಿಸುತ್ತವೆ ಎಂದು ಹೇಳಿದರು. ತಮ್ಮ ಶಿಷ್ಯರ ಬಳಗ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆಗೆ ಮಾಡುತ್ತಿರುವ ಸೇವೆಯನ್ನು ಮೆಚ್ಚಿದರು.

ಸಂಶೋಧಕರಾದ ಮಾತನಾಡಿ, ಸಾಧಕರನ್ನು ಗುರುತಿಸಿ ಗೌರವಿಸುವ ಪರಂಪರೆ ನಮ್ಮ ಸಂಸ್ಕೃತಿಯಲ್ಲಿ ಪ್ರಮುಖವಾಗಿದ್ದು, ಇಂತಹ ಸೇವಾ ಸಂಸ್ಥೆಗಳಿಗೆ ಸರ್ಕಾರ ಹಾಗೂ ಸಂಘಟನೆಗಳಿಂದ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಲಾವಿದೆ ಅವರು, ಸಮಾಜದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಗಾಯಕ ಅವರಿಗೆ 50 ವರ್ಷ ಪೂರೈಸಿದ ಅಂಗವಾಗಿ ಕಾಯಕ ಜೀವಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಿ.ಎಸ್. ರಾಮದೇವ್, ಹೆಚ್. ಸತೀಶ್ ಕುಮಾರ್, ಕೆ.ಆರ್. ಕವಿತಾ, ಗೋವಿಂದರಾಜು ಪಟೇಲ್, ದೊ.ಚಿ.ಗೌಡ, ಬಂಡ್ಳಳ್ಳಿ ವಿಜಯ್ ಕುಮಾರ್ ಹಾಗೂ ಶ್ರೀಮತಿ ದೇವಮ್ಮ ಅವರಿಗೆ ಸ್ವಾಮಿ ವಿವೇಕಾನಂದ ಸದ್ಭಾವನಾ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದೇ ವೇಳೆ ಕವಯಿತ್ರಿ ಎಂ.ಕೆ. ಲತಾಮಣಿ ಮತ್ತು ಅಧ್ಯಾಪಕ ಚಕ್ಕೆರೆ ಯೋಗೇಶ್ ಅವರಿಗೆ ಡಾ. ಸಿಸಿರಾ ಸ್ನೇಹ ಬಳಗದ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ), ಡಾ. ಕೃಷ್ಣ ಹಾನ್ ಬಾಳ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಧ್ಯಾಹ್ನ ನಡೆದ ವಸಂತ ಕವಿಗೋಷ್ಠಿ ಹಾಗೂ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮಗಳು ಸಾಹಿತ್ಯಾಸಕ್ತರ ಗಮನ ಸೆಳೆದವು. ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳು ಸಭಾಂಗಣದಲ್ಲಿದ್ದವರಿಗೆ ಮನರಂಜನೆ ನೀಡಿದವು.
