ಹಾಸನ, ಜೂ. 7: ಮಠಮಾನ್ಯಗಳು ಬೆಳೆಯಬೇಕಾದರೆ ಭಕ್ತರ ಸಹಾಯ, ಸಹಕಾರ ಮತ್ತು ಬೆಂಬಲ ಅತ್ಯಗತ್ಯ ಎಂದು ಹಾಸನದ ತಣ್ಣೀರುಹಳ್ಳ ಮಠದ ಮಠಾಧೀಶರಾದ ಶ್ರೀ ವಿಜಯಕುಮಾರ ಸ್ವಾಮೀಜಿ ಹೇಳಿದರು.
ಹಾಸನದ ತಣ್ಣೀರುಹಳ್ಳ ಮಠದಲ್ಲಿ ಭಾನುವಾರ ನಡೆದ ಶ್ರೀ ತಣ್ಣೀರುಹಳ್ಳ ಮಠದ ಭಕ್ತರ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಮಠದ ಹಿರಿಯ ಸ್ವಾಮೀಜಿಗಳಾದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಅವರ ಸ್ಮರಣೋತ್ಸವ ಕಾರ್ಯಕ್ರಮ, ದಾಸೋಹ ಭವನ ಹಾಗೂ ಸ್ವಾಮೀಜಿಗಳ ವಾಸ್ತವ್ಯಕ್ಕಾಗಿ ನಿರ್ಮಿಸಲಾದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಭಕ್ತರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಧನಸಹಾಯ ಹಾಗೂ ವಿವಿಧ ರೀತಿಯ ಸಹಕಾರ ನೀಡಿದ ಎಲ್ಲಾ ಭಕ್ತರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಮುಂದಿನ ದಿನಗಳಲ್ಲಿಯೂ ಮಠದ ಅಭಿವೃದ್ಧಿ ಕಾರ್ಯಗಳಿಗೆ ಭಕ್ತರು ಇದೇ ರೀತಿಯ ಬೆಂಬಲ ನೀಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ತಣ್ಣೀರುಹಳ್ಳ ಮಠ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಬಿ.ಪಿ. ಐಸಾಮಿಗೌಡ, ಕಾರ್ಯದರ್ಶಿ ಬಿ.ಎಸ್. ಕಾಂತರಾಜು, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸೋಮಣ್ಣ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷೆ ಗೀತಾ ಪುಟ್ಟಸ್ವಾಮಿ, ಹಳೆ ವಿದ್ಯಾರ್ಥಿಗಳ ಸಂಘದ ಮಲ್ಲಿಕಾರ್ಜುನ, ಸಂಗಮೇಶಯ್ಯ, ಶ್ರೀ ಸಿದ್ದೇಶ್ವರ ಶಿಕ್ಷಣ ಸಮಿತಿಯ ಪದಾಧಿಕಾರಿಗಳು, ನಿರ್ದೇಶಕರು, ಶಾಲೆ ಹಾಗೂ ಐಟಿಐ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು ಮತ್ತು ಭಕ್ತರು ಭಾಗವಹಿಸಿದ್ದರು.
– ಶಿವಕುಮಾರ್ ಕಟ್ಟಾಯ
