ಹಾಸನ: ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳನ್ನು ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಆಗ ಓದಿದ ವಿಷಯ ಮಸ್ತಕಕ್ಕೆ ತಲುಪಿ, ಅದರ ಅರ್ಥ ಮತ್ತು ಮಹತ್ವವನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದರು.
ನಗರದ ಗಂಧದ ಕೋಠಿ ಆವರಣದಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು (ಪ್ರಧಾನ)ದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ ‘ನಾ ಮೆಚ್ಚಿದ ಪುಸ್ತಕ’ ಓದು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಕೃತಿಗಳನ್ನು ಓದುವ ಅಭಿರುಚಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ತಾವು ಓದಿದ ಪುಸ್ತಕಗಳ ಕುರಿತು ವಿಮರ್ಶೆ ಮಂಡಿಸಿದ ರೀತಿಯನ್ನು ಮೆಚ್ಚಿದ ಅವರು, ಉಳಿದ ವಿದ್ಯಾರ್ಥಿಗಳೂ ಈ ದಿಕ್ಕಿನಲ್ಲಿ ಪ್ರಯತ್ನಿಸಬೇಕು ಎಂದರು. ಆರಂಭದಲ್ಲಿ ಅಳುಕು ಮತ್ತು ಭಯ ಸಹಜ. ಆದರೆ ಅದಕ್ಕೆ ಹೆದರಿ ಹಿಂದೆ ಸರಿಯದೆ ನಿರಂತರ ಪ್ರಯತ್ನ ಮಾಡಿದಾಗ ಮಾತ್ರ ಯಶಸ್ಸು ಸಿಗುತ್ತದೆ ಎಂದು ಸಲಹೆ ನೀಡಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಹಾಗೂ ಪ್ರಾಧ್ಯಾಪಕರಾದ ಡಾ. ಕುಶಾಲ್ ಬರಗೂರು ಮಾತನಾಡಿ, ವಿದ್ಯಾರ್ಥಿಗಳು ಹಳೆಯ ಪುಸ್ತಕಗಳ ಜ್ಞಾನವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಮನ್ವಯಗೊಳಿಸಿಕೊಂಡು ಸಮಾಜಮುಖಿ ಸಾಧನೆಗಳತ್ತ ಸಾಗಬೇಕು ಎಂದರು. “ಪುಸ್ತಕ ಬಿಟ್ಟು ಮೊಬೈಲ್ ಹಿಡಿಯಬೇಡಿ; ಮೊಬೈಲ್ ಚೀಲದಲ್ಲಿರಲಿ, ಪುಸ್ತಕ ಕೈಯಲ್ಲಿರಲಿ. ಓದುವ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದಲೇ ‘ನಾ ಮೆಚ್ಚಿದ ಪುಸ್ತಕ’ ಕಾರ್ಯಕ್ರಮ ರೂಪಿಸಲಾಗಿದೆ” ಎಂದು ಹೇಳಿದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಪುಸ್ತಕಗಳ ಜೊತೆಗೆ ಕಥೆ, ಕಾದಂಬರಿಗಳನ್ನು ಓದುವ ಹವ್ಯಾಸವೇ ತಮ್ಮನ್ನು ಸಾಹಿತ್ಯ ಕ್ಷೇತ್ರದತ್ತ ಸೆಳೆದಿತು. ನಿರಂತರ ಓದು ಮತ್ತು ಬರವಣಿಗೆಯಿಂದ ಈವರೆಗೆ 60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಲು ಸಾಧ್ಯವಾಗಿದೆ. ಓದಿನ ಮೂಲಕ ಗಳಿಸಿದ ಜ್ಞಾನ ಜೀವನದುದ್ದಕ್ಕೂ ಫಲ ನೀಡುತ್ತದೆ ಎಂದು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಹೇಮಗಂಗೋತ್ರಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎಂ. ಶಂಕರ್, ವಿದ್ಯಾರ್ಥಿನಿಯರು ವಿವಿಧ ಸಾಧಕರ ಪರಿಚಯವನ್ನು ಉತ್ತಮವಾಗಿ ಮಂಡಿಸಿರುವುದನ್ನು ಶ್ಲಾಘಿಸಿದರು. ಕನ್ನಡದ ಮಹತ್ವದ ಕೃತಿಗಳು ಹಾಗೂ ಸಿರಿ ಭೂವಲಯ ಸೇರಿದಂತೆ ಹಲವು ಅಪರೂಪದ ಗ್ರಂಥಗಳ ಕುರಿತು ಮಾಹಿತಿ ನೀಡಿ, ಬಿಡುವಿನ ವೇಳೆಯಲ್ಲಿ ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಜಿ.ಡಿ. ಅನ್ನಪೂರ್ಣ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿನಿಯರ ಜ್ಞಾನವರ್ಧನೆಗೆ ಸಹಕಾರಿಯಾಗುತ್ತವೆ. ವಿದ್ವಾಂಸರ ಉಪನ್ಯಾಸಗಳನ್ನು ಆಲಿಸುವುದರ ಜೊತೆಗೆ ವಿದ್ಯಾರ್ಥಿನಿಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿರುವುದು ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ನಿಖಿತಾ ಎಂ.ಹೆಚ್., ಜಾನ್ಸಿ ರಾಣಿ, ಪೂನಂ, ಅಂಜಲಿ, ಗುಣವತಿ, ಸುರಕ್ಷಾ, ಶೃತಿ, ಮೋಕ್ಷ ಹಾಗೂ ಯಶೋಧ ಅವರು ‘ನಾ ಮೆಚ್ಚಿದ ಪುಸ್ತಕ’ ಕುರಿತು ಮಾತನಾಡಿ ಮೆಚ್ಚುಗೆ ಗಳಿಸಿದರು. ಅವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಪುಸ್ತಕ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಿದರು.
ವೇದಿಕೆಯಲ್ಲಿ ಹಿರಿಯ ಕನ್ನಡ ಉಪನ್ಯಾಸಕರಾದ ವೆಂಕಟೇಶ್, ಸಾಹಿತಿಗಳಾದ ಡಾ. ಬರಾಳು ಶಿವರಾಮ, ಸುಂದರೇಶ್ ಡಿ. ಉಡುವಾರೆ, ಸಿರಿಕನ್ನಡ ದಿನಪತ್ರಿಕೆಯ ಸಂಪಾದಕರಾದ ಆನಂದ ಪಟೇಲ್ ನೆಲ್ಲಿಗೆರೆ ಹಾಗೂ ಕವಿ ಎನ್.ಎಲ್. ಚನ್ನೇಗೌಡ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಯಶಸ್ವಿನಿ ಪ್ರಾರ್ಥನೆ ನೆರವೇರಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕರಾದ ಪ್ರಭಾ ಆರ್. ವಂದಿಸಿದರು. ಇತಿಹಾಸ ಉಪನ್ಯಾಸಕರಾದ ಮಂಜುಳ ಆರ್. ಕಾರ್ಯಕ್ರಮ ನಿರೂಪಿಸಿದರು.
