ಹಾಸನ, ಜೂ.26: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ವ್ಯಾಪಕ ಅಕ್ರಮ, ದುರುಪಯೋಗ ಮತ್ತು ಆಡಳಿತಾತ್ಮಕ ವೈಫಲ್ಯ ನಡೆದಿದೆ ಎಂದು ಮಾಜಿ ಸಚಿವ ಹೆಚ್.ಕೆ. ಕುಮಾರಸ್ವಾಮಿ ಆರೋಪಿಸಿದರು. ಗ್ಯಾರಂಟಿ ಯೋಜನೆಗಳ ಮೇಲ್ವಿಚಾರಣೆಗಾಗಿ ರಚಿಸಲಾದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಿತಿಗಳು ಸಂಪೂರ್ಣ ವಿಫಲವಾಗಿದ್ದು, ಅವುಗಳನ್ನು ಕೂಡಲೇ ರದ್ದುಪಡಿಸಿ ಅಕ್ರಮಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಸೇರಿದಂತೆ ವಿವಿಧ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಹಲವು ವರದಿಗಳು ಪ್ರಕಟವಾಗಿವೆ. ಅಲ್ಲದೆ, ಸಿಎಜಿ (CAG) ವರದಿಯಲ್ಲೂ ಯೋಜನೆಗಳ ಅನುಷ್ಠಾನದಲ್ಲಿನ ಲೋಪಗಳು, ದುರುಪಯೋಗ ಮತ್ತು ಆಡಳಿತ ವೈಫಲ್ಯಗಳ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಹೇಳಿದರು.
ಮೂರು ವರ್ಷಗಳಿಂದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರಚಿಸಿರುವ ಗ್ಯಾರಂಟಿ ಸಮಿತಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳನ್ನು ನೇಮಿಸಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ ನೈಜ ಫಲಾನುಭವಿಗಳನ್ನು ಗುರುತಿಸುವುದು, ಯೋಜನೆಗಳ ಮೇಲ್ವಿಚಾರಣೆ ಮತ್ತು ಅಕ್ರಮ ತಡೆಯುವಲ್ಲಿ ಸಮಿತಿಗಳು ವಿಫಲವಾಗಿವೆ ಎಂದು ಆರೋಪಿಸಿದರು.
‘ಮೃತರ ಹೆಸರಿಗೂ ಹಣ ಬಿಡುಗಡೆಯಾಗಿದೆ’
ಫಲಾನುಭವಿಗಳ ಪಟ್ಟಿಯಲ್ಲಿ ಮೃತಪಟ್ಟವರ ಹೆಸರಿನಲ್ಲಿಯೂ ಹಣ ಬಿಡುಗಡೆಯಾಗಿರುವ ಕುರಿತು ವರದಿಗಳು ಬಂದಿವೆ. ಇಂತಹ ಪ್ರಕರಣಗಳನ್ನು ಸಂಬಂಧಪಟ್ಟ ಇಲಾಖೆ ಹಾಗೂ ಗ್ಯಾರಂಟಿ ಸಮಿತಿಗಳು ಏಕೆ ಪರಿಶೀಲಿಸಲಿಲ್ಲ? ಪ್ರತಿ ತಿಂಗಳು ಫಲಾನುಭವಿಗಳ ಮಾಹಿತಿಯನ್ನು ಪರಿಶೀಲಿಸುವ ವ್ಯವಸ್ಥೆ ಏಕೆ ಇರಲಿಲ್ಲ? ಎಂದು ಪ್ರಶ್ನಿಸಿದ ಅವರು, ಈ ಸಮಿತಿಗಳು ಜನಸೇವೆಗೆ ಬದಲಾಗಿ ರಾಜಕೀಯ ಉದ್ದೇಶಗಳಿಗೆ ಬಳಸಲ್ಪಡುತ್ತಿವೆ ಎಂದು ಟೀಕಿಸಿದರು.
ಈಗ ವಾರ್ಡ್ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಹೊಸ ಸಮಿತಿಗಳನ್ನು ರಚಿಸುವ ಪ್ರಸ್ತಾಪ ಮಾಡಿರುವುದು ಅಚ್ಚರಿಯ ಸಂಗತಿ. ಈಗಿರುವ ಸಮಿತಿಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸದೆ ಹೊಸ ಸಮಿತಿಗಳನ್ನು ರಚಿಸುವುದು ಜನರ ತೆರಿಗೆ ಹಣದ ದುರುಪಯೋಗ ಎಂದು ದೂರಿದರು.
‘ಪ್ರಚಾರಕ್ಕೆ ನೂರಾರು ಕೋಟಿ ವೆಚ್ಚ’
ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕಾಗಿ ಸರ್ಕಾರ ಪ್ರತಿ ತಿಂಗಳು ನೂರಾರು ಕೋಟಿ ರೂಪಾಯಿ ಜಾಹೀರಾತುಗಳಿಗೆ ವೆಚ್ಚ ಮಾಡುತ್ತಿದೆ. ವಾರ್ಷಿಕ ಸುಮಾರು ₹52 ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡುತ್ತಿರುವ ಸರ್ಕಾರ, ಮತ್ತೊಂದೆಡೆ ವಿದ್ಯುತ್, ಪೆಟ್ರೋಲ್ ಹಾಗೂ ಸಾರಿಗೆ ದರಗಳನ್ನು ಹೆಚ್ಚಿಸುವ ಮೂಲಕ ಜನರ ಮೇಲೆ ಹೆಚ್ಚುವರಿ ಹೊರೆ ಹಾಕುತ್ತಿದೆ ಎಂದು ಆರೋಪಿಸಿದರು.
ಲಿಂಗೇಶ್ ಬಂಧನದ ಬಗ್ಗೆ ಅನುಮಾನ
ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಬಂಧನದ ಕುರಿತು ಪ್ರತಿಕ್ರಿಯಿಸಿದ ಹೆಚ್.ಕೆ. ಕುಮಾರಸ್ವಾಮಿ, ಪ್ರಕರಣ ಕಾನೂನಿನ ವ್ಯಾಪ್ತಿಯಲ್ಲಿದ್ದು ತನಿಖೆ ನಡೆಯಬೇಕು. ಆದರೆ ಹಲವು ವರ್ಷಗಳ ಹಿಂದಿನ ಪ್ರಕರಣದಲ್ಲಿ ಈಗ ಬಂಧನವಾಗಿರುವುದು ರಾಜಕೀಯ ಪ್ರೇರಿತ ಕ್ರಮವೇ ಎಂಬ ಅನುಮಾನ ಮೂಡಿಸಿದೆ. ತನಿಖೆ ಶೀಘ್ರ ಪೂರ್ಣಗೊಂಡು ಸತ್ಯಾಂಶ ಹೊರಬರಬೇಕು ಹಾಗೂ ನಿರಪರಾಧಿಗಳಿಗೆ ನ್ಯಾಯ ಸಿಗಬೇಕು ಎಂದು ಹೇಳಿದರು.
ತಮ್ಮ ವಿರುದ್ಧ ಕೇಳಿಬಂದ ಆರೋಪಗಳಿಗೂ ಪ್ರತಿಕ್ರಿಯಿಸಿದ ಅವರು, “15 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ. ನನ್ನ ವಿರುದ್ಧ ಈವರೆಗೆ ಯಾವುದೇ ದೂರು ದಾಖಲಿಸಿರಲಿಲ್ಲ. ನಾನು ಯಾವುದೇ ಅಕ್ರಮ ಮಾಡಿಲ್ಲ. ಯಾರ ಬಳಿ ದಾಖಲೆಗಳಿದ್ದರೂ ಸರ್ಕಾರ ಕಾನೂನು ಪ್ರಕಾರ ತನಿಖೆ ನಡೆಸಲಿ,” ಎಂದು ಸವಾಲು ಹಾಕಿದರು.
ರಾಜ್ಯದ ಹಲವೆಡೆ ಬರಗಾಲದ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ ಮತ್ತು ವಿದ್ಯುತ್ ಕೊರತೆ ಸೇರಿದಂತೆ ಜನಜೀವನದ ಸಮಸ್ಯೆಗಳಿಗೆ ಸರ್ಕಾರ ಆದ್ಯತೆ ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ತಾಲೂಕು ಮಟ್ಟದಲ್ಲಿ ಪ್ರವಾಸ ನಡೆಸಿ ಜನರ ಅಹವಾಲುಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಜಿಲ್ಲಾ ವಕ್ತಾರ ರಘು ಹೊಂಗೆರೆ, ವಕೀಲ ಶೇಷಾದ್ರಿ, ಸಮೀರ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
