ಹಾಸನ, ಜೂ.26: ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಬಡ ಕುಟುಂಬಗಳಿಗೆ ವಿತರಿಸಲಾಗುವ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಹಾಸನ ತಾಲ್ಲೂಕಿನ ಶಾಂತಿಗ್ರಾಮ ಹೋಬಳಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 85 ಚೀಲ ಅಕ್ಕಿ ಹಾಗೂ ಒಂದು ಪಿಕಪ್ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಧರ್ಮನಾಯಕ್ ಮಾತನಾಡಿ, ಖಚಿತ ಮಾಹಿತಿ ಮೇರೆಗೆ ಹಾಸನದಿಂದ ವಾಹನವನ್ನು ಹಿಂಬಾಲಿಸಲಾಗಿದ್ದು, ಶಾಂತಿಗ್ರಾಮದ ಸೈಬರ್ಡ್ ಹೋಟೆಲ್ ಸಮೀಪ ಕೆಎ-13 ಡಿ-5895 ಸಂಖ್ಯೆಯ ಟಾಟಾ ಇಂಟರ್ ಪಿಕಪ್ ವಾಹನವನ್ನು ತಡೆದು ಆಹಾರ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಆಹಾರ ನಿರೀಕ್ಷಕರು, ತಾಲೂಕು ಆಹಾರ ಶಿರಸ್ತೇದಾರ್ ಹಾಗೂ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ವೇಳೆ ವಾಹನದಲ್ಲಿ 50 ಕೆಜಿ ತೂಕದ 85 ಚೀಲಗಳಷ್ಟು ಬಿಳಿ ಹಾಗೂ ಹಳದಿ ಬಣ್ಣದ ಅಕ್ಕಿ ಪತ್ತೆಯಾಗಿದೆ.
ಅಧಿಕಾರಿಗಳ ಪ್ರಾಥಮಿಕ ಪರಿಶೀಲನೆಯಲ್ಲಿ ಅದು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ (PDS) ವಿತರಿಸಲಾಗುವ ಅನ್ನಭಾಗ್ಯ ಅಕ್ಕಿಯಂತೆಯೇ ಕಂಡುಬಂದಿದ್ದು, ಸಾರವರ್ಧಕ ಅಕ್ಕಿಯ ಮಿಶ್ರಣವೂ ಇರುವ ಲಕ್ಷಣಗಳು ಕಂಡುಬಂದಿವೆ ಎಂದು ತಿಳಿದುಬಂದಿದೆ.

ವಾಹನ ಚಾಲಕ ತನ್ನನ್ನು ಸಯ್ಯದ್ ಸೂಚಿಯಾನ್ ಬಿನ್ ಸಯ್ಯದ್ ನಯಾಜ್, ಹಾಸನ ನಗರದ ಪೆನ್ಶನ್ ಮೊಹಲ್ಲಾ ನಿವಾಸಿ ಎಂದು ಪರಿಚಯಿಸಿಕೊಂಡಿದ್ದು, ಸಾಗಿಸುತ್ತಿದ್ದ ಅಕ್ಕಿಗೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆ, ಪರವಾನಗಿ ಅಥವಾ ಮಾಲೀಕತ್ವದ ದಾಖಲೆಯನ್ನು ಅಧಿಕಾರಿಗಳಿಗೆ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ವಶಪಡಿಸಿಕೊಂಡ ಅಕ್ಕಿಯ ಮೌಲ್ಯ ಸುಮಾರು ₹1.50 ಲಕ್ಷ ಎಂದು ಅಂದಾಜಿಸಲಾಗಿದ್ದು, ಅಕ್ಕಿ ಹಾಗೂ ವಾಹನವನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಲಾಗಿದೆ.
ಈ ಸಂಬಂಧ ಅಗತ್ಯ ವಸ್ತುಗಳ ಕಾಯ್ದೆ-1955ರ ಕಲಂ 3 ಮತ್ತು 7 ಹಾಗೂ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) ಆದೇಶ-2016ರ ನಿಯಮ 18ರಡಿ ವಾಹನ ಚಾಲಕ, ವಾಹನದ ಮಾಲೀಕ ಮತ್ತು ಅಕ್ಕಿಯ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಕ್ಕಿ ಎಲ್ಲಿಂದ ಸಂಗ್ರಹಿಸಲಾಯಿತು, ಯಾರಿಗೆ ಸಾಗಿಸಲಾಗುತ್ತಿತ್ತು ಹಾಗೂ ಇದರ ಹಿಂದೆ ಸಂಘಟಿತ ಜಾಲವಿದೆಯೇ ಎಂಬ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀರಾಮಸೇನೆ ಸಹ ಕಾರ್ಯದರ್ಶಿ ರಮೇಶ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
