ಹಾಸನ, ಜೂ.26: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ಹಾಸನ ಜಿಲ್ಲಾ ಜಾಗೃತ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಸಮಾರಂಭವನ್ನು ಜೂನ್ 29ರಂದು (ಸೋಮವಾರ) ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ಹಾಸನದ ಉದಯಗಿರಿಯ ಕೆಂಪೇಗೌಡ ಮುಖ್ಯರಸ್ತೆಯಲ್ಲಿರುವ ಪ್ರಾಂಶುಪಾಲ ಎ.ಎಚ್. ಗಣೇಶ್ ಅಂಕಪುರ ಅವರ ‘ರಾಜಶ್ರೀ ನಿಲಯ’ ನಿವಾಸದಲ್ಲಿ ನಡೆಯಲಿದೆ.
ಇದೇ ದಿನ ಬೆಳಿಗ್ಗೆ 10 ಗಂಟೆಗೆ ಹಾಸನದ ವಿದ್ಯಾನಗರದ ವಿವೇಕಾನಂದ 4ನೇ ಅಡ್ಡರಸ್ತೆಯಲ್ಲಿರುವ ಚಿತ್ರಕಲಾವಿದ ಬಿ.ಎಸ್. ದೇಸಾಯಿ ಅವರ ಕಲಾ ಗ್ಯಾಲರಿಯಲ್ಲಿ ಮತ್ತೊಂದು ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ನಿರ್ಮಲ ಚಿತ್ರಕಲಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಆರ್.ಸಿ. ಕಾರದಕಟ್ಟಿ ವಹಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ. ಕುಶಾಲ್ ಬರಗೂರು ಭಾಗವಹಿಸಿ ಮಾತನಾಡಲಿದ್ದಾರೆ.
‘ಮನೆಗೊಂದು ಗ್ರಂಥಾಲಯ’ ಅಭಿಯಾನದ ಮೂಲಕ ಮನೆಮನೆಗಳಲ್ಲಿ ಓದುವ ಸಂಸ್ಕೃತಿ ಬೆಳೆಸುವುದು, ಪುಸ್ತಕ ಓದುವ ಹವ್ಯಾಸವನ್ನು ಉತ್ತೇಜಿಸುವುದು ಹಾಗೂ ಜ್ಞಾನ ವಿಸ್ತರಣೆಗೆ ಪ್ರೋತ್ಸಾಹ ನೀಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
