ತುಮಕೂರು: ಪುಸ್ತಕಗಳನ್ನು ಸಗಟಾಗಿ ಖರೀದಿ ಮಾಡುವ ಗ್ರಂಥಾಲಯ ಇಲಾಖೆಯಲ್ಲಿ ಸಗಟು ಸಮಸ್ಯೆಗಳಿವೆ. ಈ ಇಲಾಖೆಗೆ ಚಿಕಿತ್ಸೆ ನೀಡಿ ಜೀವಂತಗೊಳಿಸುವ ಕೆಲಸವಾಗಬೇಕು. ಗ್ರಂಥಾಲಯ ಇಲಾಖೆಯನ್ನು ಸತ್ವಯುತಗೊಳಿಸಿ ಲೇಖಕರನ್ನು ಉಳಿಸುವ, ಪುಸ್ತಕ ಓದುವ ಸಂಸ್ಕೃತಿ ಬೆಳೆಸಲು ಸಾಧ್ಯವಿದೆ.ಆದರೆ ಯಾವ ಸರ್ಕಾರಗಳೂ, ಗ್ರಂಥಾಲಯ ಇಲಾಖೆ ಮಂತ್ರಿಗಳೂ ಅಂತಹ ಕಾಳಜಿ ತೋರಿಸಿಲ್ಲ ಎಂದು ಹಿರಿಯ ಸಾಹಿತಿ ನಾಡೋಜಡಾ.ಬರಗೂರು ರಾಮಚಂದ್ರಪ್ಪ ವಿಷಾದಿಸಿದರು.
ನಗರದ ಅಮಾಜಿಕೆರೆ ಅಂಗಳದ ಗಾಜಿನಮನೆಯಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ವೀರಲೋಕ ಪುಸ್ಕಕ ಸಂತೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾಡನಾಡಿದ ಅವರು, ಸಾಹಿತ್ಯ, ಪುಸ್ತಕ ಸಂಸ್ಕೃತಿಯನ್ನು ಮೆರೆಯಬಹುದಾಗಿದ್ದ ಗ್ರಂಥಾಲಯ ಇಲಾಖೆ ಯಾರಿಗೂ ಬೇಡವಾದ ನಿರ್ಲಕ್ಷಿತ ಇಲಾಖೆಯಾಗಿದೆ.ಸರ್ಕಾರ ಇನ್ನಾದರೂ ಇಲಾಖೆಯನ್ನು ಸತ್ವಯುತಗೊಳಸಬೇಕು ಎಂದು ಹೇಳಿದರು.
ಪುಸ್ತಕ ಸಂತೆ ಉದ್ಘಾಟಿಸಿದ ಹಿರಿಯ ಸಾಹಿತಿ, ನಾಡೋಜ ಹಂ.ಪ. ನಾಗರಾಜಯ್ಯ ಮಾತನಾಡಿ, ಪುಸ್ತಕ ಸಂತೆ ಎಂಬ ಪರಿಕಲ್ಪನೆ ರೋಮಾಂಚನವಾದದ್ದು. ಪುಸ್ತಕವನ್ನು ಓದುಗರ ಬಳಿಗೆ ತೆಗೆದುಕೊಂಡು ಬರುವ ಪುಸ್ತಕ ಸಂತೆಯನ್ನು ವೀರಕಪುತ್ರ ಶ್ರೀನಿವಾಸ್ ಮಾಡುತ್ತಾ ಕನ್ನಡ ಪುಸ್ತಕ ಲೋಕಕ್ಕೆ ದೊಡ್ಡಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಪುಸ್ತಕ ಸಂಸ್ಕೃತಿ ನಮ್ಮ ದೈನಂದಿನ ಜೀವನದ ಪದ್ಧತಿಯಾಗಬೇಕು.ಮನೆಯಲ್ಲಿ ಹಿರಿಯರು ಪುಸ್ತಕ ಓದುವಅಭ್ಯಾಸ ರೂಢಿಸಿಕೊಳ್ಳುವ ಮೂಲಕ ಮಕ್ಕಳಲ್ಲೂ ಅದನ್ನು ಬೆಳೆಸಬೇಕು.ಪುಸ್ತಕ ಸಂತೆಗೆ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಕರೆತರಬೇಕು ಎಂದು ಹೇಳಿದರು.
ಹಾಲಪ್ಪ ಪ್ರತಿಷ್ಠಾನ ಅಧ್ಯಕ್ಷ ಮುರಳಿಧರ ಹಾಲಪ್ಪ ಮಾತನಾಡಿ, ಶಾಲೆಗಳ ಪ್ರಾರ್ಥನೆ ಅವಧಿಯಲ್ಲಿ ವಿದ್ಯಾರ್ಥಿಗಳು ದಿನಪತ್ರಿಕೆಗಳ ಹೆಡ್ಲೈನ್ ಓದುವ ಪದ್ಧತಿಯನ್ನು ಸರ್ಕಾರ ಖಡ್ಡಾಯ ಮಾಡಿದೆ. ಇದು ವಿದ್ಯಾರ್ಥಿಗಳಲ್ಲಿ ಪತ್ರಿಕೆ, ಪುಸ್ತಕ ಓದುವ ಆಸಕ್ತಿ ಬೆಳೆಸಲು ಸಹಕಾರಿಯಾಗಿದೆ.ಮಕ್ಕಳನ್ನು ಪುಸ್ತಕ ಓದಿನ ಕಡೆಗೆ ಆಕರ್ಷಿಸಬೇಕು.ಅಂತಹ ಪುಸ್ತಕಗಳೂ ಹೊರಬರಬೇಕು.ಪಠ್ಯಪುಸ್ತಕದ ಜೊತೆ ವಿವಿಧ ವಿಷಯಗಳ ಪುಸ್ತಕ ಓದುವ ಮೂಲಕ ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳೆಸಬಹುದುಎಂದು ಹೇಳಿದರು.
ವೀರಕಪುತ್ರ ಶ್ರೀನಿವಾಸ್, ಆರ್.ಕೆ.ಶ್ರೀನಿವಾಸ್, ಕೆ.ಎಸ್.ಸಿದ್ಧಲಿಂಗಪ್ಪ,ಪ್ರೊ.ರೇವಣಸಿದ್ಧಪ್ಪ, ಡಾ.ಎಸ್.ನಾಗಣ್ಣ, ಎಸ್.ಪಿ.ಚಿದಾನಂದ್ ಮೊದಲಾದವರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
