ಹಾಸನ: ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದ ತಾತ್ಕಾಲಿಕ ಸಾಕಾನೆ ಕ್ಯಾಂಪ್ನಲ್ಲಿ ನಡೆದ ಭೀಕರ ಘಟನೆಯೊಂದು ಆತಂಕ ಮೂಡಿಸಿದ್ದು, ಕಾಡಾನೆ ಸೆರೆ ಕಾರ್ಯಾಚರಣೆಗೆ ಬಳಸಲಾಗುತ್ತಿದ್ದ ಸಾಕಾನೆ ‘ಸುಗ್ರೀವ’ ಕಾವಾಡಿಗನ ಮೇಲೆಯೇ ದಾಳಿ ನಡೆಸಿ ತುಳಿದ ಪರಿಣಾಮ ರಾಜು ಎಂಬಾತ ಗಂಭೀರವಾಗಿ ಗಾಯಗೊಂಡು ತಕ್ಷಣೆ ಹಆಸನ ನಗರದ ಹಿಮ್ಸ್ ಆಸ್ಪತ್ರೆಗೆ ತುರ್ತು ವಾಹನದಲ್ಲಿ ರವಾನಿಸಿ ಸೂಕ್ತ ಚಿಕಿತ್ಸೆ ಕೊಡಲಾಗುತ್ತಿದೆ.
ಮಾಹಿತಿಯಂತೆ, ನಿನ್ನೆ ಸೆರೆ ಹಿಡಿದ ಬಳಿಕ ತಪ್ಪಿಸಿಕೊಂಡು ಹೋಗಿದ್ದ ನರಹಂತಕ ಒಂಟಿಕೋರೆ ಕಾಡಾನೆಯನ್ನು ಮರು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು, ಮಾವುತರು ಹಾಗೂ ಕಾವಾಡಿಗರು ಬೆಳಗ್ಗಿನಿಂದಲೇ ಸಿದ್ಧತೆ ನಡೆಸುತ್ತಿದ್ದರು. ಕ್ಯಾಂಪ್ ಪ್ರದೇಶದಲ್ಲಿ ಕಾರ್ಯಾಚರಣೆಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿದ್ದ ವೇಳೆ, ಅಕಸ್ಮಿಕವಾಗಿ ಸಾಕಾನೆ ‘ಸುಗ್ರೀವ’ ಆಕ್ರೋಶಗೊಂಡು ನಿಯಂತ್ರಣ ತಪ್ಪಿದೆ. ಈ ಸಂದರ್ಭದಲ್ಲೇ ಸಮೀಪದಲ್ಲಿದ್ದ ಕಾವಾಡಿಗ ರಾಜು ಮೇಲೆ ದಾಳಿ ನಡೆಸಿದ ಸುಗ್ರೀವ, ಅವನನ್ನು ತುಳಿದು ಗಂಭೀರವಾಗಿ ಗಾಯಗೊಳಿಸಿದೆ. ದಾಳಿಯ ತೀವ್ರತೆಯಿಂದ ರಾಜು ನೆಲಕ್ಕುರುಳಿದ್ದು, ಸ್ಥಳದಲ್ಲಿದ್ದ ಇತರ ಸಿಬ್ಬಂದಿ ಆತಂಕಗೊಂಡು ತಕ್ಷಣ ನೆರವಿಗೆ ಧಾವಿಸಿದ್ದಾರೆ. ಗಾಯಗೊಂಡ ರಾಜುವಿಗೆ ತುರ್ತು ಚಿಕಿತ್ಸೆ ನೀಡುವ ಸಲುವಾಗಿ ಕೂಡಲೇ ಆಂಬುಲೆನ್ಸ್ ಮೂಲಕ ಹಾಸನ ನಗರದ ಜಿಲ್ಲಾ ಹಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಅಲ್ಲಿ ವೈದ್ಯರು ಅವನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯಕೀಯ ಮೂಲಗಳ ಪ್ರಕಾರ, ರಾಜುವಿನ ಸ್ಥಿತಿ ಗಂಭೀರವಾಗಿದ್ದು, ನಿಗಾ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆಯಿಂದಾಗಿ ಕ್ಯಾಂಪ್ ಪ್ರದೇಶದಲ್ಲಿ ಕೆಲಕಾಲ ಗೊಂದಲ ಮತ್ತು ಭೀತಿ ಉಂಟಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಮಾವುತರು ತಕ್ಷಣ ಕ್ರಮ ಕೈಗೊಂಡು ಸಾಕಾನೆ ಸುಗ್ರೀವನನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು. ಕಾರ್ಯಾಚರಣೆ ನಡೆಯುತ್ತಿರುವ ಸಂದರ್ಭದಲ್ಲೇ ಇಂತಹ ಘಟನೆ ಸಂಭವಿಸಿರುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.
ಕಾಡಾನೆ ಸೆರೆ ಕಾರ್ಯಾಚರಣೆಗಳು ಸ್ವಭಾವತಃ ಅಪಾಯಕಾರಿ ಆಗಿರುವುದರಿಂದ, ಸಾಕಾನೆಗಳ ನಡೆ-ನುಡಿಗಳನ್ನು ನಿಖರವಾಗಿ ಗಮನಿಸಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂಬ ಅಗತ್ಯ ಮತ್ತೆ ಸ್ಪಷ್ಟವಾಗಿದೆ. ಈ ಘಟನೆಯ ನಂತರ ಕ್ಯಾಂಪ್ನಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಮುಂದಿನ ಕಾರ್ಯಾಚರಣೆಗೆ ವಿಶೇಷ ಎಚ್ಚರಿಕೆ ವಹಿಸಲಾಗಿದೆ. ಸ್ಥಳೀಯರು ಹಾಗೂ ಸಿಬ್ಬಂದಿಯಲ್ಲಿ ಈ ಘಟನೆ ಆತಂಕ ಮೂಡಿಸಿದ್ದು, ಗಾಯಗೊಂಡ ರಾಜು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ವ್ಯಕ್ತವಾಗುತ್ತಿದೆ. ಹಾಸನ ನಗರದ ಹಿಮ್ಸ್ ಆಸ್ಪತ್ರೆಗೆ ಗಾಯಳು ನೋಡಲು ಜನಜಂಗುಳಿ ಕಂಡು ಬಂದಿದೆ.
