ಕೊರಟಗೆರೆ :- ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಇಂದು ಕೊರಟಗೆರೆ ತಾಲೂಕಿನ ಜಂಪೇನಹಳ್ಳಿ ತೋಟದ ಮನೆಯಲ್ಲಿ ಮಾಜಿ ಸಚಿವ ಸಿ. ವೀರಣ್ಣ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಈ ವೇಳೆ ಮಾಜಿ ಸಚಿವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ ಡಾ. ಪರಮೇಶ್ವರ್, “ಆದರ್ಶಪ್ರಾಯವಾಗಿ ರಾಜಕಾರಣ ಮಾಡಿದ ನಿಮ್ಮಂತಹ ಹಿರಿಯ ರಾಜಕಾರಣಿಗಳು ಆರೋಗ್ಯ ಕಾಪಾಡಿಕೊಂಡು ಇನ್ನಷ್ಟು ದಿನ ಸಮಾಜ ಹಾಗೂ ರಾಜಕಾರಣಕ್ಕೆ ಮಾರ್ಗದರ್ಶನ ನೀಡಬೇಕು” ಎಂದು ಅಭಿಪ್ರಾಯಪಟ್ಟರು.
ಸಿ. ವೀರಣ್ಣ ಅವರು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪ್ರತಿನಿಧಿಯಾಗಿ ಹಲವು ಬಾರಿ ಜನಸೇವೆ ಸಲ್ಲಿಸಿದ್ದು, ಜನತಾ ಪಕ್ಷದ ಪರವಾಗಿ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿದ್ದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲಿ ಸಣ್ಣ ಉಳಿತಾಯ, ಸಾರಿಗೆ, ವಾಣಿಜ್ಯ ಮತ್ತು ಕೈಗಾರಿಕೆ, ಜೈಲು ಖಾತೆ ಸೇರಿದಂತೆ ಏಳು ಪ್ರಮುಖ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.
ಸಣ್ಣ ಉಳಿತಾಯ ಸಚಿವರಾಗಿದ್ದ ಅವಧಿಯಲ್ಲಿ ಕರ್ನಾಟಕವನ್ನು ದೇಶದಲ್ಲೇ ಮೊದಲ ಸ್ಥಾನಕ್ಕೆ ತಂದು ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಜೊತೆಗೆ ರಾಜ್ಯ ವಿಧಾನಸಭೆಯ ಉಪಸಭಾಪತಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಭೇಟಿ ಸಂದರ್ಭದಲ್ಲಿ ವೀರಣ್ಣ ಅವರ ಮೊಮ್ಮಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.95 ಅಂಕ ಗಳಿಸಿರುವ ವಿಷಯ ತಿಳಿದ ಡಾ. ಪರಮೇಶ್ವರ್, ವಿದ್ಯಾರ್ಥಿನಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ನಾರಾಯಣ್, ಅರಕೆರೆ ಶಂಕರ್, ಮಹಾಲಿಂಗಯ್ಯ, ಎಲ್ಐಸಿ ರಾಜಣ್ಣ, ಕೆ.ಆರ್. ಓಬಳರಾಜ್, ಗೊಂದಿಹಳ್ಳಿ ರಂಗರಾಜು, ಕಾರ್ ಮಹೇಶ್, ಸುರೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಹಿರಿಯ ನಾಯಕರಿಗೆ ಗೌರವ ಸೂಚಿಸಿ, ಆರೋಗ್ಯ ವಿಚಾರಿಸಿದ ಡಾ. ಪರಮೇಶ್ವರ್ ಅವರ ಭೇಟಿ ಸ್ಥಳೀಯ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
– ಶ್ರೀನಿವಾಸ್ ಕೊರಟಗೆರೆ.
