ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಗಡಿ ವ್ಯವಹಾರಗಳಿಗೆ ಸಂಬಂಧಿಸಿದ ವರ್ಕಿಂಗ್ ಮೆಕ್ಯಾನಿಸಂ ಫಾರ್ ಕನ್ಸಲ್ಟೇಷನ್ ಅಂಡ್ ಕೋಆರ್ಡಿನೇಷನ್ (WMCC) ಯ 35ನೇ ಸಭೆ ಮೇ 27ರಂದು ಚೀನಾದ ಬೀಜಿಂಗ್ನಲ್ಲಿ ನಡೆಯಿತು.
ಭಾರತದ ಪರವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪೂರ್ವ ಏಷ್ಯಾ ವಿಭಾಗದ ಜಂಟಿ ಕಾರ್ಯದರ್ಶಿ ಸುಜಿತ್ ಘೋಷ್ ನೇತೃತ್ವ ವಹಿಸಿದ್ದರೆ, ಚೀನಾದ ಪರವಾಗಿ ಗಡಿ ಮತ್ತು ಸಮುದ್ರ ವ್ಯವಹಾರಗಳ ಇಲಾಖೆಯ ಮಹಾನಿರ್ದೇಶಕಿ ಹೌ ಯಾನ್ಚಿ ಪ್ರತಿನಿಧಿಸಿದ್ದರು.
ಸಭೆಯಲ್ಲಿ ಭಾರತ-ಚೀನಾ ಗಡಿ ನಿರ್ವಹಣೆ, ಗಡಿ ರೇಖೆ ನಿರ್ಧಾರ (Delimitation), ಗಡಿ ಪ್ರದೇಶಗಳಲ್ಲಿನ ಸಂವಹನ ವ್ಯವಸ್ಥೆ, ಸೇನಾ ಮಟ್ಟದ ಸಂಯೋಜನೆ ಹಾಗೂ ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡುವ ಕುರಿತು ಚರ್ಚೆ ನಡೆಯಿತು.
ಇದೇ ವೇಳೆ ಉಭಯ ದೇಶಗಳು ರಾಜತಾಂತ್ರಿಕ ಮತ್ತು ಸೈನಿಕ ಮಟ್ಟದ ಮಾತುಕತೆಗಳನ್ನು ಮುಂದುವರಿಸಲು ಒಪ್ಪಿಕೊಂಡಿವೆ. ಗಡಿ ಭಾಗದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಲು ಈಗಿರುವ ವ್ಯವಸ್ಥೆಗಳ ಮೂಲಕ ನಿರಂತರ ಸಂಪರ್ಕದಲ್ಲಿರಲು ತೀರ್ಮಾನಿಸಲಾಯಿತು.
ಭಾರತವು ಗಡಿದಾಟುವ ನದಿಗಳಿಗೆ ಸಂಬಂಧಿಸಿದ ತಾಂತ್ರಿಕ ಸಮಾಲೋಚನೆ ನಡೆಸುವ ‘ಎಕ್ಸ್ಪರ್ಟ್ ಲೆವೆಲ್ ಮೆಕ್ಯಾನಿಸಂ ಆನ್ ಟ್ರಾನ್ಸ್-ಬೋರ್ಡರ್ ರಿವರ್ಸ್’ ಸಭೆಯನ್ನು ಶೀಘ್ರ ನಡೆಸುವಂತೆ ಚೀನಾವನ್ನು ಒತ್ತಾಯಿಸಿದೆ.
WMCC ಭಾರತ-ಚೀನಾ ಗಡಿ ವ್ಯವಹಾರಗಳಿಗೆ ಸಂಬಂಧಿಸಿದ ದ್ವಿಪಕ್ಷೀಯ ಸಮಾಲೋಚನಾ ವ್ಯವಸ್ಥೆಯಾಗಿದ್ದು, ವಾಸ್ತವ ನಿಯಂತ್ರಣ ರೇಖೆ (LAC) ಪ್ರದೇಶದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ನಿರ್ವಹಿಸುವ ಉದ್ದೇಶ ಹೊಂದಿದೆ.
ಮುಂದಿನ ದಿನಗಳಲ್ಲಿ ಚೀನಾದಲ್ಲೇ ನಡೆಯಲಿರುವ ವಿಶೇಷ ಪ್ರತಿನಿಧಿಗಳ (Special Representatives) ಸಭೆಗೆ ಸಿದ್ಧತೆ ನಡೆಸಲು ಉಭಯ ದೇಶಗಳು ಒಪ್ಪಿಕೊಂಡಿವೆ.
