ಸಿಯೋಲ್, ಮೇ 21: Rajnath Singh ಅವರು ದಕ್ಷಿಣ ಕೊರಿಯಾದ Seoul ಸಮೀಪದ ಇಂಜಿಂಗಾಕ್ ಪಾರ್ಕ್ನಲ್ಲಿ ಭಾರತೀಯ ಯುದ್ಧ ಸ್ಮಾರಕವನ್ನು ಉದ್ಘಾಟಿಸಿದರು. ಕೊರಿಯಾ ಯುದ್ಧದ 75ನೇ ವಾರ್ಷಿಕೋತ್ಸವದ ಅಂಗವಾಗಿ ನಿರ್ಮಿಸಲಾದ ಈ ಸ್ಮಾರಕವು ಭಾರತೀಯ ಸೇನೆಯ 60 ಪ್ಯಾರಾ ಫೀಲ್ಡ್ ಆಂಬುಲೆನ್ಸ್ ಘಟಕ ಮತ್ತು ಕಸ್ಟೋಡಿಯನ್ ಫೋರ್ಸ್ ಆಫ್ ಇಂಡಿಯಾದ ಸೇವೆಯನ್ನು ಸ್ಮರಿಸುತ್ತದೆ.
ಕಾರ್ಯಕ್ರಮದಲ್ಲಿ ದಕ್ಷಿಣ ಕೊರಿಯಾದ ಪ್ಯಾಟ್ರಿಯಟ್ಸ್ ಮತ್ತು ವೆಟರನ್ಸ್ ವ್ಯವಹಾರಗಳ ಸಚಿವ Kwon Oh-eul ಸಹ ಭಾಗವಹಿಸಿದ್ದರು. ಉಭಯ ಸಚಿವರು ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಭಾರತೀಯ ಯೋಧರಿಗೆ ಗೌರವ ನಮನ ಸಲ್ಲಿಸಿದರು.
1950ರಿಂದ 1953ರವರೆಗೆ ನಡೆದ ಕೊರಿಯಾ ಯುದ್ಧದಲ್ಲಿ ಭಾರತೀಯ ಸೇನೆಯ 60 ಪ್ಯಾರಾ ಫೀಲ್ಡ್ ಆಂಬುಲೆನ್ಸ್ ಘಟಕ ಮಹತ್ವದ ಸೇವೆ ಸಲ್ಲಿಸಿತ್ತು. ಲೆಫ್ಟಿನೆಂಟ್ ಕರ್ನಲ್ ಎ.ಜಿ. ರಂಗರಾಜ್ ನೇತೃತ್ವದ ಈ ಘಟಕದಲ್ಲಿ 627 ಸೈನಿಕರು ಕಾರ್ಯನಿರ್ವಹಿಸಿದ್ದು, 2.22 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿತ್ತು. ಅವರ ಸೇವೆಗೆ “ಮರೂನ್ ಏಂಜಲ್ಸ್” ಎಂಬ ಹೆಸರಿನಿಂದಲೂ ಖ್ಯಾತಿ ಲಭಿಸಿತ್ತು.
ಸ್ಮಾರಕ ಉದ್ಘಾಟನೆಯ ಸಂದರ್ಭದಲ್ಲಿ ಭಾರತ ಮತ್ತು ದಕ್ಷಿಣ ಕೊರಿಯಾ ನಡುವೆ ಕೊರಿಯಾ ಯುದ್ಧ ವೀರರ ಸ್ಮರಣಾರ್ಥ ಸಹಕಾರ ಹಾಗೂ ಪರಸ್ಪರ ವಿನಿಮಯಕ್ಕೆ ಸಂಬಂಧಿಸಿದ ಒಪ್ಪಂದ ಪತ್ರಕ್ಕೂ ಸಹಿ ಹಾಕಲಾಯಿತು.
ಈ ಸ್ಮಾರಕ ನಿರ್ಮಾಣಕ್ಕೆ ಭಾರತದ ರಕ್ಷಣಾ ಸಚಿವಾಲಯವೇ ಸಂಪೂರ್ಣ ಹಣಕಾಸು ನೆರವು ನೀಡಿದೆ. ರಾಜನಾಥ್ ಸಿಂಗ್ ಅವರ ವಿಯೆಟ್ನಾಂ ಮತ್ತು ದಕ್ಷಿಣ ಕೊರಿಯಾ ಪ್ರವಾಸದ ಭಾಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
