ಕೊರಟಗೆರೆ :- ಸರ್ಕಾರಿ ಶಾಲೆಗಳ ಜೀವನೋದ್ಧಾರಕ್ಕೆ ಪಣ ತೊಟ್ಟಿರುವ ಬನಶ್ರೀ ಫೌಂಡೇಶನ್ ಮಹತ್ವದ ಹೆಜ್ಜೆ ಇಟ್ಟಿದೆ.ಸುಮಾರು 5 ಸಾವಿರ ಸ್ವಯಂಸೇವಕರ ತಂಡದೊಂದಿಗೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಈ ಸಂಸ್ಥೆ ಮುಂದಾಗಿದೆ.
ತಾಲೂಕಿನ ಹೊಳವನಹಳ್ಳಿ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ನಡೆದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಶಾಲಾ ಗೋಡೆಗಳಿಗೆ ಹೊಸ ಬಣ್ಣ ಹಚ್ಚಿ ಸ್ವಚ್ಛ ಮತ್ತು ಆಕರ್ಷಕ ವಾತಾವರಣ ನಿರ್ಮಿಸುವ ಕಾರ್ಯ ಕೈಗೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಬನಶ್ರೀ ಫೌಂಡೇಶನ್ ಜೊತೆಗೆ ಸಿಸ್ಕ್ ಕಂಪನಿಯ ಸಹಯೋಗವೂ ಇದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳಿದರಹಾಲಪ್ಪ ಅವರು, ಸರ್ಕಾರಿ ಶಾಲೆಗಳ ಸ್ವಚ್ಛತೆ ಮತ್ತು ಪರಿಸರದ ಮಹತ್ವವನ್ನು ಒತ್ತಿಹೇಳಿದರು. ಕನ್ನಡ ಚಿತ್ರರಂಗದ ನಟ ಪುನೀತ್ ರಾಜಕುಮಾರ್ ಹಾಗೂ ಪರಿಸರ ಹೋರಾಟಗಾರ್ತಿ ಸಾಲುಮರದ ತಿಮ್ಮಕ್ಕ ಅವರಂತೆ ಮಕ್ಕಳು ಪ್ರೇರಣೆಯಾಗಬೇಕು ಎಂದು ಹೇಳಿದರು. ಜೊತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರವೂ ಅಗತ್ಯವೆಂದು ಅಭಿಪ್ರಾಯಪಟ್ಟರು.
ಸ್ಥಳೀಯ ಹಳೆ ವಿದ್ಯಾರ್ಥಿ ಅಖಿಲೇಶ್ ಮಾತನಾಡಿ, ಈ ಶಾಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಗೋಡೆಗಳು ಹಾಳಾಗಿರುವುದನ್ನು ಗಮನಿಸಿ, ಕಂಪನಿಗಳ ಸಹಾಯದಿಂದ ಪುನಃ ಬಣ್ಣ ಹಚ್ಚುವ ಕೆಲಸ ಕೈಗೊಂಡಿದ್ದೇವೆ ಎಂದು ತಿಳಿಸಿ
ಈ ಯೋಜನೆಯಡಿ ಶಾಲಾ ತರಗತಿಗಳ ಸುಧಾರಣೆ, ವಿದ್ಯಾರ್ಥಿಗಳಿಗೆ ಆಕರ್ಷಕ ಕಲಿಕಾ ವಾತಾವರಣ, ಪುಸ್ತಕ ಹಾಗೂ ಸ್ಟೇಷನರಿ ವಿತರಣೆ, ಮತ್ತು ಗ್ರಾಮೀಣ ಶಿಕ್ಷಣದ ಬಲವರ್ಧನೆಗೆ ಆದ್ಯತೆ ನೀಡಲಾಗಿದೆ. ಈಗಾಗಲೇ ಹಲವಾರು ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಪರಿಸ್ಥಿತಿಯಲ್ಲಿ, ಇಂತಹ ಯೋಜನೆಗಳು ಶಿಕ್ಷಣ ಉಳಿವಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು..
ಬನಶ್ರೀ ಫೌಂಡೇಶನ್ ಸಂಸ್ಥಾಪಕ ಗಿರೀಶ್ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದೇವಾಲಯಗಳ ಜೀರ್ಣೋದ್ಧಾರ ಹಾಗೂ ಸಂಸ್ಕೃತಿ ಉಳಿವಿಗೆ ಕೆಲಸ ಮಾಡಿದ್ದೇವೆ.ಇದೀಗ ತುಮಕೂರು ಜಿಲ್ಲೆಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿದ್ದೇವೆ ಎಂದರು. ಸರ್ಕಾರಿ ಶಾಲೆಗಳ ಮಕ್ಕಳು ಯಾವುದೇ ರೀತಿಯಲ್ಲೂ ಹಿಂದೆ ಇಲ್ಲ, ಅವರಿಗೆ ಇಂಗ್ಲಿಷ್ ಶಿಕ್ಷಣ ನೀಡುವ ಕೆಲಸವೂ ಮಾಡುತ್ತೇವೆ ಗ್ರಾಮೀಣ ಪ್ರದೇಶದಲ್ಲಿ ಕೆರೆ ಅಭಿವೃದ್ಧಿ, ಗೋಶಾಲೆಗಳ ಸ್ಥಾಪನೆ ಮತ್ತು ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ಬನಶ್ರೀ ಫೌಂಡೇಶನ್, ಸ್ವಯಂ ಸಿರಿವಂತ ಸಾರ್ವಜನಿಕರ ಸಹಕಾರವನ್ನು ಆಹ್ವಾನಿಸಿದೆ.
ಕಾರ್ಯಕ್ರಮದಲ್ಲಿ ಬನಶ್ರೀ ಫೌಂಡೇಶನ್ ಹಾಗೂ ಸಿಸ್ಕಾ ಕಂಪನಿಯ ಸದಸ್ಯರು ಸೇರಿದಂತೆ ಹೊಳವನಹಳ್ಳಿ ಶಾಲೆಯ ಎಸ್ ಡಿ ಎಮ್ ಸಿ ಉಪಾಧ್ಯಕ್ಷ ಜಯರಾಜ್ ಸಿಸ್ಕೋ ಕಂಪನಿಯ ಮ್ಯಾನೇಜರ್, ಅಖಿಲೇಶ್ ಮುಖ್ಯ ಶಿಕ್ಷಕ ರಾಜಣ್ಣ, ಶಿವಕುಮಾರ್ ಸೇರಿದಂತೆ ಫೌಂಡೇಶನ್ ಸಿಬ್ಬಂದಿಗಳು ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.
