ಕೆ.ಆರ್.ಪೇಟೆ, ಜು.15: ಮತದಾರರ ತೀರ್ಪಿಗೆ ತಲೆಬಾಗುತ್ತೇನೆ. ಆದರೆ ಅದನ್ನೇ ನಮ್ಮ ದೌರ್ಬಲ್ಯ ಎಂದು ಭಾವಿಸಿ ಶಾಸಕ ಹೆಚ್.ಟಿ. ಮಂಜು ಹಾಗೂ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್ ದಬ್ಬಾಳಿಕೆಯ ರಾಜಕಾರಣ ನಡೆಸಿದರೆ, ನನ್ನ ರಾಜಕೀಯ ಜೀವನ ಇರುವವರೆಗೂ ತಲೆಬಾಗುವುದಿಲ್ಲ ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಸಾರಂಗಿ ಸಹಕಾರ ಸಂಘದ ನೂತನ ನಿರ್ದೇಶಕರ ಅಭಿನಂದನಾ ಸಮಾರಂಭದ ಬಳಿಕ, ತಮ್ಮ ವಿರುದ್ಧ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿ ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಾರಂಗಿ ಸೊಸೈಟಿ ಚುನಾವಣೆಯಲ್ಲಿ ಕುತಂತ್ರದಿಂದ ನಮ್ಮ ಬಣ ಸೋಲು ಕಂಡಿದೆ. ಅದನ್ನೇ ನೆಪ ಮಾಡಿಕೊಂಡು ನಮಗೆ ಮತ ನೀಡಿದ ಮತದಾರರನ್ನು ಶಾಸಕರು ಅಪ್ರಬುದ್ಧರು ಎಂದು ಹೀಯಾಳಿಸಿರುವುದು ಸರಿಯಲ್ಲ. ಅವರ ತಂಡಕ್ಕೆ ಮತ ನೀಡಿದವರೇ ಪ್ರಬುದ್ಧರು ಎಂಬ ರೀತಿಯಲ್ಲಿ ಹಿಟ್ಲರ್ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇಂತಹ ದಬ್ಬಾಳಿಕೆಗೆ ಹೆದರುವ ಜಾಯಮಾನ ನನ್ನದಲ್ಲ. ಇದಕ್ಕೆ ತಾಲ್ಲೂಕಿನ ಜನತೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ನನ್ನ ಮನ್ಮುಲ್ ಗೆಲುವನ್ನು ಕೇವಲ 252 ಮತಗಳ ಅಂತರ ಎಂದು ಲಘುವಾಗಿ ಮಾತನಾಡುವವರು, ತಾವೇ ಮನ್ಮುಲ್ ಚುನಾವಣೆಯಲ್ಲಿ 114 ಮತಗಳ ಅಂತರದಿಂದ ಗೆದ್ದಿರುವುದನ್ನು ನೆನಪಿಸಿಕೊಳ್ಳಬೇಕು ಎಂದು ಟೀಕಿಸಿದರು.
ನಮ್ಮ ಬಣವನ್ನು ಕಾಂಗ್ರೆಸ್ ಬಣ ಎಂದು ಆರೋಪಿಸುವವರೇ ಸಾರಂಗಿ ಗ್ರಾಮದ ಕಾಂಗ್ರೆಸ್ ಮುಖಂಡರೊಂದಿಗೆ ಸೇರಿ ಚುನಾವಣೆ ನಡೆಸಿದ್ದಾರೆ. ರಾಜ್ಯದಲ್ಲಿ ಜೆಡಿಎಸ್–ಬಿಜೆಪಿ ಮೈತ್ರಿ ಇದ್ದರೂ, ಕೆ.ಆರ್.ಪೇಟೆಯಲ್ಲಿ ಮಾತ್ರ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಇದೆ. ಕಳೆದ ಪುರಸಭೆ ಚುನಾವಣೆ ಇದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಕಳೆದ ಮೂರು ವರ್ಷಗಳಿಂದ ಜೆಡಿಎಸ್ ಪಕ್ಷದ ಸಂಘಟನೆಗಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ. ನನ್ನನ್ನು ಕಾಂಗ್ರೆಸ್ ಎಂದು ಕರೆಯುವುದರಿಂದ ಏನೂ ಆಗುವುದಿಲ್ಲ. ಅದನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದರೆ ಮಾತ್ರ ಒಪ್ಪುತ್ತೇನೆ. ನಿಮ್ಮ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
2028ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್–ಬಿಜೆಪಿ ಮೈತ್ರಿಯ ಅಭ್ಯರ್ಥಿ ಯಾರು ಎಂಬುದನ್ನು ಪಕ್ಷದ ವರಿಷ್ಠರೇ ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ನಂತರ ಮಾತನಾಡಿದ ಸಾರಂಗಿ ಸಹಕಾರ ಸಂಘದ ನೂತನ ನಿರ್ದೇಶಕ ಸಾರಂಗಿ ವಿಶ್ವನಾಥ್, “ನಮ್ಮ ಬಣ ಚುನಾವಣೆಯಲ್ಲಿ ಸೋತಿರಬಹುದು. ಆದರೆ ಅಧಿಕಾರ, ಹಣಬಲ ಹಾಗೂ ಆಮಿಷಗಳ ವಿರುದ್ಧ ನಾವು ಗೆದ್ದಿದ್ದೇವೆ. ಕುತಂತ್ರದಿಂದ ಸೋತಿದ್ದರೂ ಜನರ ಮನಸ್ಸಿನಲ್ಲಿ ನಮ್ಮ ಸ್ಥಾನ ಉಳಿದಿದೆ. ಪಕ್ಷದ ಸಂಘಟನೆ ಬಿಟ್ಟು ತಾಲ್ಲೂಕು ಮಟ್ಟದ ನಾಯಕರ ವಿರುದ್ಧ ಲಘುವಾಗಿ ಮಾತನಾಡುವುದು ಸರಿಯಲ್ಲ” ಎಂದು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಪುರುಷೋತ್ತಮ್, ದಯಾನಂದ, ರಮೇಶ್, ಮಂಜುನಾಥ್, ಕುಮಾರಸ್ವಾಮಿ, ಅಭ್ಯರ್ಥಿಗಳಾದ ಪ್ರೇಮಮ್ಮ ಮತ್ತು ಲತಾ, ಮುದ್ದಣ್ಣ, ಅಶೋಕ್, ಶ್ಯಾರಹಳ್ಳಿ ಜಯರಾಮ್, ಸಾರಂಗಿ ದೇವರಾಜು, ಕೈಗೊಂನಹಳ್ಳಿ ಸರ್ವೇ ಮಂಜುನಾಥ್, ಪ್ರಸನ್ನ, ಶ್ಯಾರಹಳ್ಳಿ ಮನು, ಸುರೇಶ್, ಜಗದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಮನು ಮಾಕವಳ್ಳಿ, ಕೆ.ಆರ್.ಪೇಟೆ
