ಕೆ.ಆರ್.ಪೇಟೆ,ಏ.21: ತಾಲ್ಲೂಕಿನ ಹೊಸಹೊಳಲು ಗ್ರಾಮದ ದಲಿತ ಕುಳುವಾಡಿಗಳಿಗೆ ಸೇರಿದ ಸ.ನಂ.141ರಲ್ಲಿನ ಖಾಲಿ ನಿವೇಶನಗಳನ್ನು ಕೂಡಲೇ ಮೂಲ ವಾರಸುದಾರರಾದ ಡಿ.ಸ್ವಾಮಿ ಮತ್ತು ಇತರೆ 9ಮಂದಿ ಕುಟುಂಬದವರಿಗೆ ಹಂಚಿಕೆ ಮಾಡಿ ಅನುಪಾಲನಾ ವರದಿ ನೀಡುವಂತೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗವು ಆದೇಶ ಮಾಡಿ ಸುಮಾರು ಎರಡು ತಿಂಗಳು ಕಳೆದರೂ ಸಹ ಯಾವುದೇ ಕ್ರಮ ವಹಿಸದೇ ಇರುವ ಪುರಸಭಾ ಆಡಳಿತ ಹಾಗೂ ತಾಲ್ಲೂಕು ಆಡಳಿತದ ಕ್ರಮವನ್ನು ಖಂಡಿಸಿ ಹೊಸಹೊಳಲು ಗ್ರಾಮದ ನೊಂದ ದಲಿತ ಕುಟುಂಬಗಳ ಸದಸ್ಯರು ವಿವಿಧ ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ಪುರಸಭಾ ಕಚೇರಿಯ ಮುಂದೆ ಪ್ರತಿಭಟನೆ ತಮಟೆ ಚಳುವಳಿ ನಡೆಸಿದರು.
ಹೊಸಹೊಳಲು ಗ್ರಾಮದ ಜಮಾಬಂದಿಗೆ ಸೇರಿದ ಸರ್ವೆ ನಂ 141ರಲ್ಲಿರುವ 1.31ಗುಂಟೆ ಜಮೀನನ್ನು ಸರ್ಕಾರ ಯಾವುದೇ ರೀತಿಯಲ್ಲಿಯೂ ಸ್ವಾಧೀನ ಪಡಿಸಿಕೊಂಡಿಲ್ಲ. ಈ ಬಗ್ಗೆ ಎಲ್ಲಿಯೂ ದಾಖಲೆಗಳು ಇರುವುದಿಲ್ಲ. ನಮ್ಮ ದಲಿತ ಕುಳುವಾಡಿ ಕುಟುಂಬಗಳಿಗೆ ಸೇರಿದ ಬೇಕಾದ ಭೂಮಿಯಲ್ಲಿ ಸುಮಾರು 40ನಿವೇಶನಗಳನ್ನು ಸೃಷ್ಠಿಸಲಾಗಿದೆ.
ಈ ಪೈಕಿ 26ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಉಳಿದ 14 ನಿವೇಶನಗಳು ಖಾಲಿ ಇದ್ದು ಈ ನಿವೇಶನಗಳನ್ನು ಅರ್ಜಿದಾರರಾದ ಕುಳುವಾಡಿಕೆ ವಂಶಸ್ಥರಾದ ಡಿ.ಸ್ವಾಮಿ ಸೇರಿದಂತೆ 9ಮಂದಿ ಕುಟುಂಬಗಳಿಗೆ ತಕ್ಷಣವೇ ಹಂಚಿಕೆ ಮಾಡಿ ಅನುಪಾಲನಾ ವರದಿ ನೀಡುವಂತೆ ತಹಸೀಲ್ದಾರ್ ಮತ್ತು ಪುರಸಭಾ ಮುಖ್ಯಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗವು ಆದೇಶ ಮಾಡಿ ಪತ್ರ ಬರೆದಿರುತ್ತದೆ. ಆದರೆ ಇದೂವರೆವಿಗೂ ಪುರಸಭೆಯ ಮುಖ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿದ್ದಾರೆ.
ಜೊತೆಗೆ ಆಯೋಗದ ಪತ್ರವನ್ನು ತಾಲ್ಲೂಕು ಕಚೇರಿಯ ವಿಷಯ ನಿರ್ವಾಹಕ ಅಮೃತ್ ರಾಜ್ ಎಂಬುವವರು ತಹಸೀಲ್ದಾರ್ ಅವರ ಗಮನಕ್ಕೆ ತಾರದೆ, ಪತ್ರವನ್ನು ಈ ಪ್ರಕರಣದ ಎದುರುದಾರರಿಗೆ ಸೋರಿಕೆ ಮಾಡಿ ಅನುಕೂಲ ಮಾಡಿಕೊಟ್ಟಿರುತ್ತಾರೆ. ಆದ್ದರಿಂದ ಅಮೃತರಾಜ್ ವಿರುದ್ದ ಎಸ್ಸಿ.ಎಸ್.ಟಿ. ದೌರ್ಜನ್ಯ ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸಬೇಕು ಹಾಗೂ ಅವರನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಪ್ರತಿಭಟನಾಕಾರರು ಮೇಲಧಿಕಾರಿಗಳನ್ನು ಒತ್ತಾಯ ಮಾಡಿದರು.

ಸದರಿ ಪ್ರಕರಣದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿರುವ ಪುರಸಭೆಯ ಮುಖ್ಯಾಧಿಕಾರಿ ಅಶೋಕ್ ಅವರ ವಿರುದ್ದವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ಮಾತಂಗಿ ಮಾದಿಗ ಸಮಾಜ ಪರಿವರ್ತನ ವೇದಿಕೆಯ ಮಂಡ್ಯ ಜಿಲ್ಲಾಧ್ಯಕ್ಷ ಕುಮಾರ್ ಒತ್ತಾಯಿಸಿದರು.
ಹೊಸಹೊಳಲು ಗ್ರಾಮದ ಸರ್ವೆ ನಂ.141ರಲ್ಲಿ 9 ದಲಿತ ಕುಳುವಾಡಿಕೆ ಕುಟುಂಬಗಳಿಗೆ ಸೇರಿದ 14 ನಿವೇಶನಗಳ ಹಂಚಿಕೆಗೆ ಸಂಬAಧಿಸಿದಂತೆ ರಾಜ್ಯ ಎಸ್ಸಿ-ಎಸ್ಟಿ ಆಯೋಗವು ಈಗಾಗಲೇ ಸ್ಪಷ್ಟ ತೀರ್ಪು ನೀಡಿದೆ. ಆಯೋಗದ ತೀರ್ಪಿನ ಅನ್ವಯ ಪಾಂಡವಪುರ ಉಪವಿಭಾಗಾಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳು ಪುರಸಭಾ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಆದರೂ ಅಧಿಕಾರಿಗಳು ನಿವೇಶನ ಹಂಚಿಕೆ ಮಾಡಲು ಪುರಸಭಾ ಮುಖ್ಯಾಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಅಧಿಕಾರಿಗಳು ಮೇಲಿಂದ ಮೇಲೆ ಹಲವು ಆದೇಶ ಬಂದರೂ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಿರವುದಿಲ್ಲ ಹಾಹಾಗಿ ಈ ಚಳುವಳಿಯನ್ನು ಆರಂಭಿಸಲಾಗಿದೆ ನ್ಯಾಯ ಸಿಗುವವರೆವಿಗೂ ಈ ನಮ್ಮ ಅನಿರ್ಧಿಷ್ಠಾವಧಿ ಪ್ರತಿಭಟನೆಯು ಮುಂದುವರೆಯಲಿದೆ ಎಂದು ಕುಮಾರ್ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಮಾತಂಗಿ ಮಾದಿಗ ಸಮಾಜ ಪರಿವರ್ತನ ವೇದಿಕೆ ರಾಜ್ಯಾಧ್ಯಕ್ಷ ಪ್ರಭು ಹಿತ್ತಲಮನಿ, ರಾಜ್ಯ ಕಾರ್ಯದರ್ಶಿ ಮಹೇಶ್ ಹಿತ್ತಲಮನಿ, ಮಂಡ್ಯ ಜಿಲ್ಲಾಧ್ಯಕ್ಷ ಕುಮಾರ್, ತಾಲೂಕು ಅಧ್ಯಕ್ಷರಾದ ಆಲೇನಹಳ್ಳಿ ಚಲುವರಾಜು, ಜಿಲ್ಲಾ ಉಪಾಧ್ಯಕ್ಷ ವಿಷ್ಣುರಾಜ್, ಹೆಚ್.ಡಿ.ರವಿಕುಮಾರ್, ಅನಿಲ್ಕುಮಾರ್, ಗಣೇಶ್, ಸ್ವಾಮಿ, ಮಂಜು, ಹೊಸಹೊಳಲು ಅನಿಲ್, ಶಿವರಾಜ್, ಕಿರಣ್, ಮಧು, ಸಚಿನ್. ಮೂಡನಹಳ್ಳಿ ದೇವರಾಜು, ಶಿವರಾಮ್ ಸಣ್ಣಮುತ್ತಮ್ಮ ಹರಿರಾಯನಹಳ್ಳಿ ಶಿವಣ್ಣ, ರಮೇಶ್, ರವಿಕುಮಾರ್ ಸೇರಿದಂತೆ 9ಕುಟುಂಬಗಳ ಸದಸ್ಯರು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಸಿದ್ದರು.
ಪ್ರತಿಭಟನೆಯ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಸುನಿಲ್ ಕುಮಾರ್ ಮತ್ತು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕೆ.ದಿವಾಕರ್ ಹಾಜರಿದ್ದು ಪ್ರತಿಭಟನಾಕಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು.
– ಶ್ರೀನಿವಾಸ್ ಆರ್.
====================================
