ಕೆ.ಆರ್.ಪೇಟೆ,ಏ.21: ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರದವನ್ನು ಕಲಿಸಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಶ್ರೀ ಪಂಚಭೂತೇಶ್ವರ ಸುಕ್ಷೇತ್ರದಲ್ಲಿ ಪೀಠಾಧ್ಯಕ್ಷರಾದ ಶ್ರೀ ರುದ್ರಮುನಿ ಸ್ವಾಮೀಜಿ ರವರ ನೇತೃತ್ವದಲ್ಲಿ ಮಕ್ಕಳಿಗೆ ಸಂಸ್ಕಾರದ ಅರಿವು ಮೂಡಿಸುವ ಬೇಸಿಗೆ ಶಿಬಿರ ಆಯೋಜಿಸುತ್ತಿರುವುದು ಶ್ಲಾಘನೀಯವಾದುದು ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.
ಅವರು ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬೆಡದಹಳ್ಳಿಯ ಶ್ರೀ ಪಂಚಭೂತೇಶ್ವರ ಶ್ರೀ ಕ್ಷೇತ್ರದಲ್ಲಿರುವ ಶ್ರೀ ಮಠದಲ್ಲಿ ಮಕ್ಕಳಿಗೆ ಉಚಿತ ಸಂಸ್ಕಾರ ಜ್ಞಾನ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದೆ ಮಕ್ಕಳು ಶಾಲೆಯ ಬೇಸಿಗೆ ರಜಾ ಕಾಲದಲ್ಲಿ ಅಜ್ಜಿ ಮನೆಗೆ ಹೋಗುತ್ತಿದ್ದರು. ಅಲ್ಲಿ ಗೆಳೆಯರೊಂದಿಗೆ ಗೋಲಿ ಆಟ, ಬುಗುರಿ ಆಟ, ಮರಕೋತಿ ಆಟ, ಕುಂಬೆಬಿಲ್ಲೆ, ಪಚ್ಚಿ ಆಟ, ಕಣ್ಣಾ ,ಮುಚ್ಚಾಲೆ ಆಟ ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇದರಿಂದ ಅಜ್ಜಿ ಮನೆಯೇ ಬೇಸಿಗೆ ಶಿಬಿರದ ಕಾರ್ಯಕ್ರಮ ಸ್ಥಳವಾಗಿತ್ತು. ಆದರೆ ಈಗ ಪೋಷಕರು ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಸಾವಿರಾರು ಹಣ ಕೊಟ್ಟು ಸೇರಿಸುತ್ತಿದ್ದಾರೆ. ಆದರೆ ನಮ್ಮ ಬೆಡದಹಳ್ಳಿ ಶ್ರೀ ಪಂಚಭೊತೇಶ್ವರ ಸುಕ್ಷೇತ್ರ ಪೀಠಾಧ್ಯಕ್ಷರಾದ ಶ್ರೀ ರುದ್ರಮುನಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಉಚಿತವಾಗಿ ಸುಮಾರು 50ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿರುವುದು ಈ ಭಾಗದ ಮಕ್ಕಳಿಗೆ ವರದಾನವಾದುದಾಗಿದೆ.

ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಸಂಸ್ಕಾರ ಜ್ಞಾನ ನೀಡುವ ಮೂಲಕ ಬಾಲ್ಯದಲ್ಲಿಯೇ ಮಕ್ಕಳಿಗೆ ಗುರು ಹಿರಿಯರಿಗೆ, ತಂದೆ-ತಾಯಿಗಳಿಗೆ ಯಾವು ರೀತಿ ಗೌರವ ನೀಡಬೇಕು ಅವರೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸಲಾಗುತ್ತಿದೆ ಇದರಿಂದ ಪೋಷಕರಿಗೆ ಜೊತೆಗೆ ಚಿತ್ರಕಲೆ, ಸಂಗೀತಾ, ನೃತ್ಯ, ಗಾಯನ, ಪರಿಸರ ಜಾಗೃತಿ, ನೀರು ಸಂರಕ್ಷಣೆ ಜಾಗೃತಿ ಸೇರಿದಂತೆ ಹತ್ತು ಹಲವು ಕಾರ್ಯಕ್ರಮದೊಂದಿಗೆ 10ದಿನಗಳ ಕಾಲ ಉಚಿತವಾಗಿ ಈ ಶಿಬಿರವನ್ನು ಆಯೋಜಿಸುತ್ತಾ ಬಂದಿರುವುದು ಶ್ರೀಮಠಕ್ಕೆ ಮಕ್ಕಳ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ. ಇದಲ್ಲದೇ ಶ್ರೀ ಪಂಚಭೂತೇಶ್ವರ ಮಠವು ಕೋವಿಡ್ ಅವಧಿಯಲ್ಲಿ ಹಲವು ಗ್ರಾಮಗಳ ಬಡವರಿಗೆ ಉಚಿತ ಅನ್ನದಾಸೋಹ ವ್ಯವಸ್ಥೆ ಮಾಡಿದ್ದು ಮಠವು ಸಮಾಜದ ಬಡಜನರ ಬಗ್ಗೆ ಹೊಂದಿರುವ ಸಾಮಾಜಿಕ ಹೊಣೆಗಾರಿಕೆಯನ್ನು ತೋರಿಸುತ್ತದೆ. ಶ್ರೀ ಮಠವು ಇನ್ನೂ ಹೆಚ್ಚು ಹೆಚ್ಚು ಸೇವೆಗಳನ್ನು ಕೈಗೊಂಡು ತಾಲ್ಲೂಕಿನ ನಾಡಿನ ಜನತೆಯ ಅಚ್ಚುಮೆಚ್ಚಿನ ಶ್ರೀ ಕ್ಷೇತ್ರವಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದ ಶಾಸಕ ಹೆಚ್.ಟಿ.ಮಂಜು ಅವರು ಶ್ರೀ ಪಂಚಭೂತೇಶ್ವರ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಕೈಲಾದ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ಪಂಚಭೂತೇಶ್ವರ ಸುಕ್ಷೇತ್ರ ಪೀಠಾಧ್ಯಕ್ಷರಾದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ ಪ್ರತಿ ವರ್ಷದಂತೆ ದಾನಿಗಳ ಸಹಾರದೊಂದಿಗೆ ಊಟ ವಸತಿ ಸಹಿತ 10 ದಿನದ ಮಕ್ಕಳಿಗೆ ಸಂಸ್ಕಾರ ಶಿಬಿರ ಆಯೋಜನೆ ಮಾಡಲಾಗಿದ್ದು ಈ ಕಾರ್ಯಕ್ರಮಕ್ಕೆ ಶಾಸಕರಾದ ಹೆಚ್.ಟಿ.ಮಂಜು ಅವರು ಇದೇ ಪ್ರಥಮ ಭಾರಿಗೆ ಆಗಮಿಸಿ ಶುಭ ಹಾರೈಸಿದ್ದು ಹೆಮ್ಮೆಯ ವಿಚಾರವಾಗಿದೆ. ಶಾಸಕರು ಹಾಗಾಗ್ಗೆ ಕ್ಷೇತ್ರಕ್ಕೆ ಬೇಟಿ ನೀಡಿ ಶ್ರೀ ಮಠದ ಅಭಿವೃದ್ಧಿಗೆ ಕೈಲಾದ ನೆರವು ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೊಡಗಳ್ಳಿ ವಿ.ಮಂಜೇಗೌಡ, ತಾಲ್ಲೂಕು ಟಿ.ಎ.ಪಿ.ಎಂ.ಎಸ್ ನಿರ್ದೇಶಕ ಎನ್.ಕೆ.ದೀಲೀಪ್ಕುಮಾರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಇಂಜಿನಿಯರಿಂಗ್ ಕಾಲೇಜು ಉಪನ್ಯಾಸಕ ಎಂ.ಎಸ್.ಸುಬ್ರಹ್ಮಣ್ಯ, ಮುಖ್ಯ ಶಿಕ್ಷಕ ಮಹೇಶ್, ಗ್ರಾಮ ಪಂಚಾಯಿತಿ ಮಾಜಿ ಉಪಾದ್ಯಕ್ಷ ಸುನೀಲ್, ಗ್ರಾ.ಪಂ.ಸದಸ್ಯ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಶಿಕ್ಷಕ ಪ್ರಕಾಶ್, ಶ್ರೀ ಮಠದ ಕಾರ್ಯದರ್ಶಿ ಕಾಂತರಾಜು ಪತ್ರಕರ್ತರಾದ ಶ್ರೀನಿವಾಸ್, ಕಾಡುಮೆಣಸ, ಚಂದ್ರು ಸೇರಿದಂತೆ ಮತ್ತಿತರರು ಭಾಗವಹಸಿದ್ದರು.
– ಶ್ರೀನಿವಾಸ್ ಆರ್.
===============================
