ಕೆ.ಆರ್.ಪೇಟೆ: ಸ್ವಾತಂತ್ರ್ಯ ಬಂದು 75 ವರ್ಷವಾದರೂ ನಮ್ಮ ಗ್ರಾಮಕ್ಕೆ ಒಳ್ಳೆ ರಸ್ತೆ ಭಾಗ್ಯ ಇಲ್ಲ. 20 ವರ್ಷದಿಂದ ಇದೇ ಗುಂಡಿ ರಸ್ತೆಯಲ್ಲಿ ಶಾಲಾ ಮಕ್ಕಳು ಬೀಳುತ್ತಿದ್ದಾರೆ,ಗರ್ಭಿಣಿಯರು ನರಳುತ್ತಿದ್ದಾರೆ ಎಂದು ಚಿಕ್ಕಗಾಡಿಗನಹಳ್ಳಿ ನಂಜುಂಡಿ ಕಣ್ಣೀರಿಟ್ಟು ಆಕ್ರೋಶ ಹೊರಹಾಕಿದರು.
ತಾಲ್ಲೂಕಿನ ಬೂಕನಕೆರೆ ಹೋಬಳಿಯ ಚಿಕ್ಕಗಾಡಿಗನಹಳ್ಳಿ ಗ್ರಾಮದ ಗುಂಡಿರಸ್ತೆ ಬಳಿ ನಿಂತು ಪ್ರತಿಭಟನೆ ನಡೆಸಿ ಮಾತನಾಡಿದರು.ನಮ್ಮ ಗ್ರಾಮ ಚಿಕ್ಕಗಾಡಿಗನಹಳ್ಳಿ ಮುಖ್ಯರಸ್ತೆ ಕಳೆದ 20 ವರ್ಷಗಳಿಂದ ದುರಸ್ತಿ ಕಂಡಿಲ್ಲ ಡಾಂಬರ್ ಸಂಪೂರ್ಣ ಕಿತ್ತು ಹೋಗಿ, ಅಲ್ಲಲ್ಲಿ 2-3 ಅಡಿ ಆಳದ ಗುಂಡಿಗಳು ನಿರ್ಮಾಣವಾಗಿವೆ. ಮಳೆಗಾಲದಲ್ಲಿ ಈ ರಸ್ತೆ ಕೆಸರುಗದ್ದೆಯಾಗಿ ಮಾರ್ಪಾಡಾಗುತ್ತದೆ. ಒಂದೇ ಮಳೆಗೆ ಮಂಡಿಯುದ್ದ ನೀರು ನಿಂತು ವಾಹನ ಸಂಚಾರವೇ ಸ್ಥಗಿತಗೊಳ್ಳುತ್ತದೆ.ನಿತ್ಯ ಅಪಘಾತದ ಭೀತಿ ಜೊತೆಗೆ ಈ ರಸ್ತೆಯಲ್ಲಿ ವಾರಕ್ಕೆ ಒಂದು ಅಪಘಾತ ಸಾಮಾನ್ಯವಾಗಿದೆ.ದ್ವಿಚಕ್ರ ವಾಹನ ಸವಾರರು ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಶಾಲೆಗೆ ಹೋಗುವ ಚಿಕ್ಕ ಮಕ್ಕಳು ಬಿದ್ದು ಪುಸ್ತಕ-ಬ್ಯಾಗ್ ಎಲ್ಲಾ ಕೆಸರಾಗುತ್ತದೆ.ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಆ್ಯಂಬುಲೆನ್ಸ್ನಲ್ಲಿ ಕರೆದೊಯ್ಯುವಾಗ ಗುಂಡಿಗಳಲ್ಲಿ ಕುಲುಕಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ ಎಂದು ಆರೋಪಿಸಿದ ಅವರು *ದಲಿತರು ಎಂಬ ಕಾರಣಕ್ಕೆ ತಾರತಮ್ಯ* ನಮ್ಮ ಗ್ರಾಮದಲ್ಲಿ ಶೇ.90ರಷ್ಟು ದಲಿತರು ಹಾಗೂ ಹಿಂದುಳಿದ ವರ್ಗದ ಕುಟುಂಬಗಳೇ ವಾಸವಾಗಿದ್ದಾರೆ. ಹಾಗಾಗಿ ಚುನಾವಣೆಯಲ್ಲಿ ಗೆದ್ದ ಜನಪ್ರತಿನಿಧಿಗಳು ಉದ್ದೇಶಪೂರ್ವಕವಾಗಿ ಅಭಿವೃದ್ಧಿ ವಿಚಾರದಲ್ಲಿ ತಾತ್ಸಾರ ತೋರುತ್ತಿದ್ದಾರೆ. 20 ವರ್ಷದಿಂದ ಗ್ರಾಮ ಪಂಚಾಯಿತಿಯಿಂದ ಅಧಿಕಾರಿಗಳಿಗೆ ಹಾಗೂ ವಿಧಾನಸೌಧದ ತೆರಳುವ ಸ್ಥಳಿಯ ಶಾಸಕರಿಗೆ ಜನಪ್ರತಿನಿದಿನಗಳಿಗೆ ಮನವಿ ಸಲ್ಲಿಸಿದ್ದೇವೆ ಎಲ್ಲರಿಗೂ ಗೊತ್ತು. ಆದರೆ ಯಾರೂ ಕ್ಯಾರೆ ಎನ್ನುತ್ತಿಲ್ಲ. ನಾವು ತೆರಿಗೆ ಕಟ್ಟುವುದಿಲ್ಲವೇ? ನಮಗೆ ಮೂಲಭೂತ ಸೌಕರ್ಯ ಬೇಡವೇ?” ಎಂದು ಪ್ರಶ್ನಿಸಿ ಸರ್ಕಾರ, ಸ್ಥಳೀಯ ಶಾಸಕರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿ ಚುನಾವಣೆ ಬಂದಾಗ ಮಾತ್ರ ಓಟು ಭಿಕ್ಷೆ ಬೇಡಲು ಬರುವ ಜನಪ್ರತಿನಿಧಿಗಳು, ಗೆದ್ದ ಮೇಲೆ 5 ವರ್ಷ ಗ್ರಾಮದ ಕಡೆ ತಿರುಗಿಯೂ ನೋಡುವುದಿಲ್ಲ ಎಂದು ಯುವ ಮುಖಂಡ ನಂಜುಂಡಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಚಿಕ್ಕಗಾಡಿಗನಹಳ್ಳಿ ಮೊಬೈಲ್ ರವಿ, ಶ್ರೀಧರ್, ಚೆಲುವರಾಜು, ಸುನಿಲ್, ಮನು, ರಾಕೇಶ್, ಚಂದ್ರು, ನಂಜುಂಡ, ದೇವಾನಂದ, ಧೀರೇಂದ್ರ ವಿಠಲಾಪುರ ಜಗದೀಶ್, ವೆಂಕಟೇಶ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
