ರಾಮನಾಥಪುರ, ಜು. 3: ಹಾಸನ ಹಾಲು ಒಕ್ಕೂಟದ ಕೂಡಿಗೆ ನಂದಿನಿ ಹಾಲು ಡೈರಿಯಲ್ಲಿ 25 ವರ್ಷಗಳ ಕಾಲ ಶಿಸ್ತು, ಪ್ರಾಮಾಣಿಕತೆ ಹಾಗೂ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದು ನಿವೃತ್ತ ಉಪ ವ್ಯವಸ್ಥಾಪಕ ಡಿ.ಎನ್. ಮಲ್ಲೇಶ್ ಹೇಳಿದರು.
ಕೂಡಿಗೆ ನಂದಿನಿ ಹಾಲು ಡೈರಿಯಲ್ಲಿ ಅವರ ನಿವೃತ್ತಿ ಅಂಗವಾಗಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪತ್ನಿ ರೇಣುಕಾ ಅವರೊಂದಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಾಸನ, ಅರಕಲಗೂಡು ಹಾಗೂ ಕೂಡಿಗೆ ಡೈರಿಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದ್ದು, ಡೈರಿಯ ಅಭಿವೃದ್ಧಿಗೆ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸಿದ್ದೇನೆ. ಈ ಅವಧಿಯಲ್ಲಿ ಸಹಕರಿಸಿದ ವ್ಯವಸ್ಥಾಪಕ ನಂದೀಶ್, ನಂದಿನಿ ಹಾಲು ಡೈರಿ ಏಜೆಂಟರ್ ಎಂ.ಎನ್. ಕುಮಾರಸ್ವಾಮಿ, ಸಿಬ್ಬಂದಿ ಹಾಗೂ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಂದಿನಿ ಹಾಲು ಡೈರಿ ಏಜೆಂಟರ್ ಎಂ.ಎನ್. ಕುಮಾರಸ್ವಾಮಿ, ಮಲ್ಲೇಶ್ ಅವರು ತಮ್ಮ ಸೇವಾವಧಿಯಲ್ಲಿ ಎಲ್ಲರೊಂದಿಗೆ ಸ್ನೇಹಪೂರ್ವಕವಾಗಿ ನಡೆದುಕೊಂಡು ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್, ಮಲ್ಲೇಶ್ ಅವರ ಶಿಸ್ತು, ಕಾರ್ಯನಿಷ್ಠೆ ಮತ್ತು ಜನಸ್ನೇಹಿ ವ್ಯಕ್ತಿತ್ವವನ್ನು ಶ್ಲಾಘಿಸಿ, ಅವರ ಸೇವೆ ಡೈರಿಗೆ ಮಾದರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಡಿಕೇರಿ ನಗರಸಭಾ ಸದಸ್ಯೆ ಮಂಜುಳ, ಉಪನ್ಯಾಸಕಿ ರೇಣುಕಾ ಮಲ್ಲೇಶ್, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷ ಆರ್.ಕೆ. ಶ್ರೀನಿವಾಸ್, ಡೈರಿ ಸಹಾಯಕ ವ್ಯವಸ್ಥಾಪಕ ಸಂತೋಷ್, ನಿವೃತ್ತ ನೌಕರರಾದ ಸೋಮಯ್ಯ, ವೆಂಕಟೇಶ್, ರಾಧಾಕೃಷ್ಣ ಸೇರಿದಂತೆ ಹಲವರು ಮಲ್ಲೇಶ್ ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು.
– ಕುಮಾರಸ್ವಾಮಿ ಎಂ.ಎನ್.
