ತುಮಕೂರು: ಕಾನೂನು ಪದವಿ ಮುಗಿಸಿದ ಯುವ ವಕೀಲರ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ. ಆಜವಾಬ್ದಾರಿಯನ್ನು ನಿಭಾಯಿಸಿಲು ನಿರಂತರಅಧ್ಯಯನ, ಶಿಸ್ತು, ಬದ್ಧತೆ, ನೈತಿಕತೆ, ಕ್ರಿಯಾಶೀಲತೆ ರೂಢಿಸಿಕೊಂಡು ವೃತ್ತಿಬದುಕಿನಲ್ಲಿ ಯಶಸ್ವಿಯಾಗಬೇಕು ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿಗಳಾದ ಪಿ.ಕೃಷ್ಣಭಟ್ ಹೇಳಿದರು.
ನಗರದ ವಿದ್ಯೋದಯ ಕಾನೂನು ಕಾಲೇಜಿನ ಈ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ಕಾನೂನು ಸೇವಾ ಕೇಂದ್ರ, ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತಿತರ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಪದವಿಯ ನಂತರ ಯಶಸ್ವಿ ವಕೀಲರಾಗಲು ಕಾನೂನಿನ ಆಳವಾದ ಅಧ್ಯಯನ ಮಾಡಬೇಕು. ಜೊತೆಗೆ ಮಹನೀಯ ಸಾಧನೆಗಳ ಜೀವನಚರಿತ್ರೆ, ಅವರು ಬರೆದ ಪುಸ್ತಕಗಳನ್ನು ಓದಿ ಅವರ ಅನುಭವ, ಸಲಹೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕುಮಹಾತ್ಮಗಾಂಧಿ, ಡಾ.ಅಂಬೇಡ್ಕರ್, ವಲ್ಲಭಭಾಯಿಪಟೇಲ್, ಅಬ್ರಹಾಂಲಿಂಕನ್ ಸೇರಿದಂತೆ ಜಗತ್ತಿನ ಬಹುತೇಕ ನಾಯಕರು ಕಾನೂನು ಅಧ್ಯಯನ ಮಾಡಿದವರು ಇಲ್ಲವೆ, ಕಾನೂನು ತಿಳಿದವರೇ ಆಗಿದ್ದಾರೆ. ಉತ್ತಮ ನಾಯಕರಾಗಲು ಕಾನೂನಿನ ಹಿನ್ನೆಯೂ ಅಗತ್ಯವೆಂದುದು ಇದರಿಂದ ತಿಳಿಯುತ್ತದೆ. ಇಂತಹ ಸಾಧಕರ ಜೀವನ ಚರಿತ್ರೆ ಓದಬೇಕು, ಅವರಂತೆ ಯಶಸ್ಸಿನ ಹಾದಿಯಲ್ಲಿ ಸಾಗಬೇಕು. ಸಾರ್ವಜನಿಕರಿಗೆ ಕಾನೂನು ಸೇವೆ, ಸಲಹೆ ನೀಡಬೇಕಾದ ವಕೀಲರು ಅಡ್ಡದಾರಿಯಲ್ಲಿ ನ್ಯಾಯ ಒದಗಿಸುವ ಪ್ರಯತ್ನ ಮಾಡಬಾರದು, ಸರಿಯಾದ ಕಾನೂನು ಮಾರ್ಗ ಅನುಸರಿಸುವ ನ್ಯಾಯವಾದಿಗಳಿಗೆ ಹೆಚ್ಚಿನ, ಶಾಶ್ವತ ಗೌರವ, ಮಾನ್ಯತೆ ದೊರೆಯುತ್ತದೆ ಎಂದು ತಿಳಿಸಿದರು.
ಕಾನೂನು ಪದವಿ ನಂತರ ವಿಫುಲ ಅವಕಾಶಗಳಿವೆ. ವಕೀಲರಾಗಬಹುದು, ನ್ಯಾಯಾಧೀಶರಾಗಬಹುದು, ಕಾನೂನು ಕಾಲೇಜುಗಳ ಉಪನ್ಯಾಸಕರಾಗಬಹುದು, ದೊಡ್ಡ ಕಂಪನಿಗಳಲ್ಲಿ ಕಾನೂನು ಸಲಹೆಗಾರರಾಗಬಹುದು. ಓದುವ ಹವ್ಯಾಸ ಬೆಳೆಸಿಕೊಂಡು ಜ್ಞಾನ ವೃದ್ಧಿಸಿಕೊಳ್ಳುವವರು, ಎಲ್ಲರಿಗಿಂಥಾ ಭಿನ್ನವಾಗಿ ಯೋಚಿಸುವ ಕ್ರಿಯಾಶೀಲತೆ ರೂಢಿಸಿಕೊಳ್ಳುವವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂದು ಹೇಳಿದ ನ್ಯಾಯಮೂರ್ತಿ ಕೃಷ್ಣಭಟ್, ವಿದ್ಯೋದಯ ಕಾನೂನು ಕಾಲೇಜು ನ್ಯಾಯಾಧೀಶರನ್ನು ತಯಾರು ಮಾಡುವ ನರ್ಸರಿ ಇದ್ದಂತೆ ಇಲ್ಲಿ ಕಲಿತ ನೂರಕ್ಕೂ ಹೆಚ್ಚು ಜನ ನ್ಯಾಯಾಧೀಶರಾಗಿದ್ದಾರೆ ಎಂದರು.
ವಿದ್ಯೋದಯ ಕಾನೂನು ಕಾಲೇಜಿನ ಶೈಕ್ಷಣಿಕ ಮತ್ತು ಆಡಳಿತ ನಿರ್ದೇಶಕರು, ವಿದ್ಯೋದಯ ಫೌಂಡೇಶನ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಹೆಚ್.ಎಸ್. ರಾಜು ಅವರು ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಅವರು ಕಾನೂನು ಕ್ಷೇತ್ರದಲ್ಲಿ ಮಾಡಿರುವ ಸೇವಾಸಾಧನೆ ಪರಿಚಯಿಸಿದರು. ಟ್ರಸ್ಟ್ನ ಸಿಇಓ ಪ್ರೊ.ಕೆ. ಚಂದ್ರಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯರಾದ ಶಮಾ ಸೈದಿ ವಾರ್ಷಿಕ ವರದಿ ವಾಚಿಸಿದರು.
ವಿವಿಧ ವಿಷಯಗಳಲ್ಲಿ ಡಾಕ್ಟರೇಟ್ ಗೌರವ ಗಳಿಸಿದ ಕಾಲೇಜಿನ ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ಎ. ನಾರಾಯಣಸ್ವಾಮಿ, ಡಾ.ಆರ್.ರಮೇಶ್, ಡಾ.ಜಿ.ವೈ.ನಟರಾಜ್, ಡಾ.ಎಸ್.ಗಂಗಾಧರ್, ಡಾ.ಮುದ್ದುರಾಜು, ಡಾ.ಎನ್.ಹೆಚ್.ಕುಮಾರ್, ಡಾ.ಮಮತಾ ಕ್ಯಾತಣ್ಣನವರ್, ಡಾ.ಆಂಜನೇಯನಾಯಕ್, ಡಾ.ವಿ.ಕಿಶೋರ್ ಅವರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಯುವ ಮತ್ತು ರೆಡ್ಕ್ರಾಸ್ ಸಮಿತಿ ಸಂಯೋಜಕಿ ಕೆ.ಎಸ್.ಪುಷ್ಪ, ಸಾಂಸ್ಕೃತಿಕ ಸಮಿತಿ ಸಂಯೋಜಕ ಡಾ.ಜಿ.ವೈ.ನಾಗರಾಜು, ಕಾನೂನು ಸೇವೆಗಳ ಸಂಯೋಜಕಿ ಎ.ಹೆಚ್.ರಶ್ಮಿ ಮೊದಲಾದವರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
