ಕೊರಟಗೆರೆ: ಆನ್ಲೈನ್ ವಹಿವಾಟು ಮಾಡುವ ಔಷಧಿಗಳಿಗೆ ಭದ್ರತೆ ಮತ್ತು ಗ್ಯಾರಂಟಿಯೇ ಇಲ್ಲ. ಬಡರೋಗಿಗಳ ಮೇಲೆ ಕೇಂದ್ರ ಮತ್ತು ರಾಜ್ಯ ಸರಕಾರ ಚೆಲ್ಲಾಟ ಆಡದೇ ತಕ್ಷಣ ವಹಿವಾಟು ನಿಲ್ಲಿಸಬೇಕು ಎಂದು ಕೊರಟಗೆರೆ ತಾಲೂಕು ಔಷಧ ವ್ಯಾಪಾರಿಗಳ ಸಂಘವು ಸರಕಾರಗಳ ವಿರುದ್ದ ಬುಧವಾರ ಪ್ರತಿಭಟನೆ ನಡೆಸಿತು.
ಕೊರಟಗೆರೆ ಪಟ್ಟಣದ ಸರಕಾರಿ ಬಸ್ನಿಲ್ದಾಣದಿಂದ ಮಿನಿವಿಧಾನ ಸೌಧ ಕಚೇರಿಯ ವರೇಗೆ ಕಾಲ್ನಡಿಗೆಯಲ್ಲಿ ಮೆರವಣಿಗೆಯೊಂದಿಗೆ ತೆರಳಿ ತಹಶೀಲ್ದಾರ್ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಆನ್ಲೈನ್ ವಹಿವಾಟು ಸ್ಥಗೀತ ಮಾಡುವಂತೆ ಮನವಿ ಪತ್ರ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕೊರಟಗೆರೆ ತಾ.ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ನಂಜುಂಡಿ.ಕೆ.ಆರ್ ಮಾತನಾಡಿ ಆರೋಗ್ಯಕ್ಕೆ ಔಷಧ ಪೂರಕ ಆಗುವ ಬದಲಾಗಿ ಮಾರಕ ಆಗುತ್ತೀದೆ. ಆನ್ಲೈನ್ ಮೂಲಕ ವಹಿವಾಟು ಆಗುವ ಔಷದಿಗಳು ಯುವಕರ ಮೇಲೆ ಗಂಭೀರ ಪರಿಣಾಮ ಬೀರಲಿವೆ. ದೇಶದಲ್ಲಿ 2ಲಕ್ಷಕ್ಕೂ ಅಧಿಕ ಕುಟುಂಬ ಔಷಧ ವ್ಯಾಪರವನ್ನೇ ನಂಬಿ ಜೀವನ ಮಾಡುತ್ತಿವೆ ಎಂದು ಹೇಳಿದರು.
ತಾ.ಔಷಧಿ ವ್ಯಾಪಾರಿಗಳ ಸಂಘದ ಪ್ರಸನ್ನಕುಮಾರ್ ಮಾತನಾಡಿ, ಔಷಧ ವ್ಯಾಪಾರವನ್ನೇ ವೃತ್ತಿ ಪರವಾಗಿ ಕಾರ್ಯನಿರ್ವಹಿಸುತ್ತಿರುವ ನಮಗೆ ಆನ್ಲೈನ್ ಮೂಲಕ ಸಿಗುತ್ತಿರುವ ನಕಲಿ ಔಷಧಿಗಳಿಂದ ವ್ಯಾಪಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಆನ್ಲೈನ್ ಸಿಗುವ ಔಷಧಿ ಖರೀದಿಸುತ್ತಿರುವುದೇ ಹೆಚ್ಚಾಗಿ ಯುವಕರು, ವೈದ್ಯರ ಮಾರ್ಗದರ್ಶನವಿಲ್ಲದೇ ಯುವಕರೇ ಔಷಧಿ ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು.
ಔಷಧ ವ್ಯಾಪಾರಿಗಳ ಸಂಘದ ಸದಸ್ಯ ಈಶಣ್ಣ ಮಾತನಾಡಿ, ನಕಲಿ ಔಷಧಿ, ಆನ್ಲೈನ್ ವ್ಯಾಪರ, ಡಿಸ್ಕೊಂಟ್ ವ್ಯಾಪಾರಗಳ ವಿರುದ್ಧ ನಮ್ಮ ಹೋರಾಟ. ರಾಷ್ಟ್ರಾದ್ಯಂತ ಗುಣಮಟ್ಟ ಔಷಧಿಗೆ ತಕ್ಕಂತೆ ಬೆಲೆ ನಿಗಧಿ ಮಾಡಬೇಕು. ವೈದ್ಯರ ಅನುಮತಿಯಿಲ್ಲದೆ ಯಾವುದೇ ರೀತಿಯ ಔಷಧಿಗಳು ಅನ್ಲೈನ್ನಲ್ಲಿ ಸುಲಭವಾಗಿ ದೊರೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಔಷಧ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಶಿವಶಂಕರ್, ಖಚಾಂಚಿ ದಿಲೀಪ್, ಮುಖಂಡರಾದ ರಂಗಣ್ಣ, ಮಾರುತಿಕುಮಾರ್, ಉಮಾಜಗದೀಶ್, ಶಶಿಕುಮಾರ್, ಮೂರ್ತಿ, ನಾಗರಾಜು, ಸುರೇಶ್ ಬಾಬು, ರಾಕೇಶ್ಬಾಬು, ರಾಮು ಸೇರಿದಂತೆ ಇತರರು ಇದ್ದರು.
– ಶ್ರೀನಿವಾಸ್ ಕೊರಟಗೆರೆ.
