ಹಿಂದೆ ನಾನು ವೃತ್ತಿ ನಿರತನಾಗಿದ್ದಾಗ(ಈಗ ವಿಶ್ರಾಂತ) ಒಮ್ಮೆ ನನ್ನ ಸಲಹೆಗೆ ಎಂದು ಬಹು ಪ್ರತಿಷ್ಠ ತಂತ್ರಜ್ಞಾನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೂವತ್ತು ವರ್ಷಗಳ ವಯೋಮಾನದ ಯುವಕ ಕೊಠಡಿಗೆ ಬಂದಾತ “ಸರ್, ಕೆಲವು ತಿಂಗಳುಗಳಿಂದ ಸರಿಯಾಗಿ ನಿದ್ರೆ ಬರುತ್ತಿಲ್ಲ, ಬೇಜಾರು” ಎಂದ. ಈತ ತನ್ನ ಇಂಜನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದ ತಕ್ಷಣವೆ ಕೆಲಸ ಸಿಕ್ಕಿತ್ತು. ಮೂರು ವರ್ಷಗಳು ಕೆಲಸ ಮಾಡಿದ ನಂತರ ಮದುವೆ ಆಗಿತ್ತು. ಆತ ಇಲ್ಲೆ ಹತ್ತಿರದ ಹಳ್ಳಿಯಿಂದ ಬಂದವನಾಗಿದ್ದರೂ ವಿದ್ಯಾಭ್ಯಾಸವೆಲ್ಲಾ ಹತ್ತಿರದ ನಗರದಲ್ಲೆ ಮಾಡಿದ್ದ. ಇಬ್ಬರ ಅಕ್ಕಂದಿರಾದ ಮೇಲೆ ಆತ ಹುಟ್ಟಿದ.
ಸಾಮಾನ್ಯ ರೈತಾಪಿ ಕುಟುಂಬದಿಂದ ಬಂದಂತ್ತಾ ಅವನ ಯಶೋಗಾಥೆ ಉನ್ನತ ಮಟ್ಟದಾಗಿತ್ತು. ಎರಡು ವರ್ಷದ ಸಂಸಾರ, ಮಕ್ಕಳಾಗಿರಲಿಲ್ಲ. ಈತನ ಶ್ರೀಮತಿ ಹಳ್ಳಿಯಿಂದ ಬಂದಿದ್ದರೂ ಶ್ರೀಮಂತ ಕುಟುಂಬ. ನೋಡಲು ಚೆನ್ನಾಗಿದ್ದಾಳೆ, ಹೇಳಬೇಕೆಂದರೆ ಇವನಿಗೆ ತಕ್ಕ ಜೋಡಿ. ಈಕೆ ಅಚ್ಚುಕಟ್ಟಾಗಿ ಮನೆ ನಿರ್ವಹಣೆ ಮಾಡುತ್ತಿದ್ದಳು. ಆದರೆ ಈತನಿಗೆ ಈಕೆಯನ್ನು ನೋಡಿದಾಗಲೆಲ್ಲಾ ಹೊಟ್ಟೆಯಲ್ಲಿ ಸಂಕಟ, ಕಸಿವಿಸಿ, ರೇಗಾಡೋ ನಡುವಳಿಕೆ, ತಾತ್ಸಾರ ಮನೋಭಾವ ಹೀಗೆ ಹಲವಾರು. ಹೆಂಡತಿಯಾದರೂ ಏನು ಮಾಡಬೇಕು? ಸ್ವಲ್ಪ ಮುನಿಸಿಕೊಂಡು ಒಂದು ದಿನ ರಾತ್ರಿ ಊಟ ಅದ ನಂತರ ಗಂಡನನ್ನು ನಗುತ್ತಾ ಕೇಳಿಯೇಬಿಟ್ಟಳು “ಯಾಕ್ರಿ, ಏನಾಗಿದೆ ನಿಮಗೆ, ಯಾಕೆ ರೇಗ್ತೀರ?”.ಈ ಪ್ರಶ್ನೆಗೆ ಆತ “ಮಾರಾಯಗಿತ್ತಿ ನೀ ನಗ್ಬೇಡ” ಎಂದೆನ್ನುತಾ ಆತನ ರೂಮಿಗೆ ಸೇರಿದ. ಆಕೆಯ ನಗುವೇ ಇವನಿಗೆ ಬೇಡವಾಗಿತ್ತು. ಅವಳ ನಗು ಇವನನ್ನು ವಿಚ್ಛೇದನ ಮಟ್ಟಕ್ಕೆ ತೆಗೆದುಕೊಂಡುಹೋಗಿತ್ತು.
ಇವನ ವರ್ತನೆಗೆ ಕಾರಣ, ಹಲವಾರು ಬಾರಿ ಈಕೆಯನ್ನು ತನ್ನ ಮಿತ್ರರ ಜೊತೆ ಅಥವ ಕಂಪನಿ ಔತಣ ಕೂಟಗಳಿಗೆ ಕೊಂಡೊಯತ್ತಿದ್ದಾಗ ತನ್ನ ಶ್ರೀಮತಿಯ ನಗು ಇವನಿಗೆ ಇರಸು ಮುರುಸಾಗಿ ಪರಿಣಮಿಸುತ್ತಿತ್ತು. ಇಲ್ಲಿ ಮುಖ್ಯವಾದ ಅಂಶ ಇವನ ಸ್ನೇಹಿತರು ತನ್ನ ಹೆಂಡತಿಯ ನಗುವಿಗೆ ಹಿಂದಿನಿಂದ ಆಡುಕೊಳ್ಳುವುದ್ದನ್ನು ಗಮನಿಸಿದ್ದ ಎನ್ನುವುದು ಇವನ ವಾದ. ಇವನು ನನಗೆ ಹೇಳಿದ ಕಾರಣ “ಈಕೆ ನಗುವಾಗ ಒಂದು ತರಹದ ಕಾಗೆಯ ತರಹ ಕರ್ಕಶ ಶಬ್ದ ಹೊರ ಹೊಮ್ಮುತ್ತೆ ಸರ್”. ಆಕೆಯನ್ನು ಕರಿಸಿ, ನಗಸಿ ಅವಳ ನಗುವನ್ನು ಕೇಳಿಸಿಕೊಂಡ ನನಗೆ ಅಂತಹ ಯಾವುದೇ ಕರ್ಕಶ ಶಬ್ದ ಕೇಳಿಸಿ ಕೊಳ್ಳಲಿಲ್ಲ. ಅವನ ಇತಿಹಾಸ ಕೇಳಿಸಿಕೊಂಡ ನಾನು ಇವನಲ್ಲಿ ಶ್ರವಣ ದೋಷ ಇರಬಹುದು ಎಂದು ಕಿವಿ ಮೂಗು ಗಂಟಲಿನ ಸಲಹೆಯನ್ನು ಪಡೆದೆ. ಅಂತಹ ಯಾವುದೇ ಸಮಸ್ಯೆಯು ಇವನಲ್ಲಿ ಇರಲಿಲ್ಲ. ಹೀಗಿದ್ದಾಗ ಇವನಲ್ಲಿ ಯಾವ ಸಮಸ್ಯೆ ಇರಬಹುದು? ಆತನಲ್ಲಿ ಗ್ರಹಿಕೆಯ ಸಮಸ್ಯೆ ಇರಬಹುದೆಂಬ ನಿರ್ಧಾರಕ್ಕೆ ಬಂದೆ.

ನನ್ನ ಹತ್ತಿರ ಕೆಲವರು “ಸರ್ ನನ್ನ ದವಡೆ ಸರಿ ಇಲ್ಲ, ನನ್ನ ಮೂಗು ಸರಿ ಇಲ್ಲ, ನನ್ನ ಹಲ್ಲು ವಕ್ರವಾಗಿದೆ” ಎಂದು ಹೇಳಿಕೊಂಡು ಬರುತ್ತಾರೆ. ಪರಿಕ್ಷಿಸಿದರೆ ಅಂತಹ ನ್ಯೂನತೆಗಳು ಕಾಣುವುದಿಲ್ಲ. ಕೆಲವರು ಸಂಗಾತಿ ವಿರುದ್ದ ಅವರ ಶೀಲದ ಬಗ್ಗೆ ಅನುಮಾನ ಪಡುತ್ತಾರೆ. ಇಂತಹ ಅನುಮಾನಾಸ್ಪದ ಕಾರಣದಿಂದ ಹತ್ಯೆಗಳು ಮತ್ತು ಆತ್ಮ ಹತ್ಯೆಗಳು ಆಗುವುದನ್ನು ಕೇಳಿದ್ದೇವೆ ಮತ್ತು ಓದಿದ್ದೇವೆ. ಇಂತಹ ಸಮಸ್ಯೆಗಳಿಂದ ಅನೇಕರು ವಿಚ್ಚೇದನೆ ಪಡೆಯುತ್ತಾರೆ. ಮನೋ ವೈದ್ಯ ಲೋಕದಲ್ಲಿ ಈ ಸಮಸ್ಯೆಗಳನ್ನು “ಸಿಂಗಲ್ ಡೆಲ್ಯುಸನಲ್ ಡಿಸಾರ್ಡರ್” ಎಂಬುದಾಗಿ ತಿಳಿಸಲಾಗಿದೆ. ಇಂತಹ ಮಾನಸಿಕ ವಿಭ್ರಮೆಯ ಲಕ್ಷಣಗಳಿಗೆ ಔಷಧೊಪಚಾರವಿದ್ದರೂ ಚಿಕಿತ್ಸೆಗೆ ಸ್ಪಂದಿಸುವುದಿಲ್ಲ. ಕೊನೆಯಲ್ಲಿ ವಿಚ್ಚೇದನಕ್ಕೆ ನಾನಾ ಕಾರಣಗಳು.
ಅನೇಕ ಅನೇಕ ಸಂಸಾರಿಕ ಆಗು ಹೋಗುಗಳಿಂದ ಆಗುವ “ಫಲವತ್ತತೆಯ ಸೂಚ್ಯಂಕ”, ಇಂದಿನ ಈ ಅಂಕಣದ ಉದ್ದೇಶ.
ನಾನು ಸಾಮಾಜಿಕ ವಿದ್ವಾಂಸನಲ್ಲ ಅಥವ ಈ ಕ್ಷೇತ್ರದ ಸಂಶೋಧಕನೂ ಅಲ್ಲ. “ತಂತ್ರ” ದ ಆಧಾರದ ಮೇಲೆ ಈ ಸೂಚ್ಯಂಕವನ್ನು ಸಂಕ್ಷಿಪ್ತವಾಗಿ ವಿವರಿಸುವ ನನ್ನ ಇಂದಿನ ಪ್ರಯತ್ನ. ತಂತ್ರದ ಒಳ ಅರ್ಥ ಜೀವನ. ಬೌದ್ಧ ಧರ್ಮದಲ್ಲಿ ಜೀವನದ ಅಂಶ ಸಂಸಾರ. ಸಂಸಾರ ಸಿದ್ದಾಂತದ ಪ್ರತಿಪಾದನೆ ‘ಮಿಲನ’. ಈ ಮಿಲನ ಶಾರೀರಕ ಮತ್ತು ಮನಸ್ಸಿನಿಂದ. ಇವೆರಡು ಇಲ್ಲವಾದರೆ ಸಂಸಾರವಿಲ್ಲ. ಈ ಸಂಬಂಧ ಆದಿ ಕಾಲದಿಂದಲೂ ತನ್ನ ಕಾಲಘಟ್ಟದಲ್ಲಿ ತಲೆ ತೂಗುವಂತೆ ಬೆಸೆದು ಬಂದಿದೆ. ಹೆಣ್ಣು ಮತ್ತು ಗಂಡು ಆದಿ ಕಾಲದಲ್ಲಿ ವಿಭಜಿತವಾಗಿದ್ದು ಹೇಗೆ ಎಂಬುದು ನನಗೆ ತಿಳಿದಿಲ್ಲ. ಗಂಡು ಹೆಣ್ಣು ಅನ್ಯ ಗ್ರಹಗಳಿಂದ ಬೇರೆ ಬೇರೆ ಸಮಯದಲ್ಲಿ ಭೂಮಿಗೆ ಬಂದು ಇಳಿದಿರಬಹುದೆಂಬ ವಾದವಿದೆ. ಭೂಮಿಗೆ ಸಂಸಾರ ಮತ್ತು ಸಂಸಾರಕ್ಕೆ ದೇವರು. ಇದು ಒಂದು ತರಹದ ವಿರೋಧಾಭಾಸ ಮತ್ತು ಅಭಿನವ ಸಂಬಂಧ ಕೂಡ. ನನ್ನ ತರ್ಕ ದೇವರು ಇದ್ದಾನೆ ಅನ್ನುವುದಾದರೆ ಇವನನ್ನು ಅರಿಯಲು ಯಾರಾದರೂ ಬೇಕಲ್ಲವೇ? ದೇವರನ್ನು ಅರಿಯುವ ಜೀವಿ ಮಾನವ. ಬೇರೆ ಜೀವಿಗಳಿಗೆ ಅರಿಯುವಂತಹಾ ಶಕ್ತಿ ತೀರ ಕಡಿಮೆ. ಕಾರಣ, ಮಾನವನದು ಉತ್ಕೃಷ್ಟವಾದ ವಿಕಾಸತೆ ಹೊಂದಿರುವ ಮೆದುಳು. ಆದುದರಿಂದಲೇ ಆದಿ ಶಂಕರಾಚಾರ್ಯರು ಮಾನವನನ್ನು ಕುರಿತು “ಅಹಂ ಬ್ರಹ್ಮಾಸ್ಮಿ” ಎಂದಿದ್ದರು. ಈ ಯುಕ್ತಿಯ ಅರ್ಥ “ನನ್ನ ಆತ್ಮದ ಅರಿವು ಬ್ರಹ್ಮನಲ್ಲಿ ಮಿಲನವಾಗಿದೆ” ಎಂದು. ಒಂದು ಅರ್ಥದಲ್ಲಿ ಈ ಯುಕ್ತಿ ‘ಸಂಯೋಗ’ ವಿಚಾರವಾಗಿದೆ. ಇಂತಹ ಮಿಲನ ಯೋಗಯುಕ್ತ. ಆದರೆ ಶಾರೀರಕ ಮಿಲನವನ್ನು “ಮಿಥನೋತ್ಸವ” ಎಂದು ಕರೆಯಲ್ಪಡುವುದೇ? ಕರೆಯಬಹುದು, ತಂತ್ರ ಗ್ರಂಥದ ವಿಚಾರ ಧಾರೆ ಇದನ್ನು “ಭೋಗ – ಸಂಭೋಗ”. ಆದರೆ ಯೋಗದ ದೃಷ್ಟಿಯಲ್ಲಿ “ಯೋಗ – ಸಂಯೋಗ”, ಅಂದರೆ “ಯೋಗ – ಭೋಗ, ಸಂಯೋಗ – ಸಂಭೋಗ”.
ಬೈರವ ವಿಜ್ಞಾನ ತಂತ್ರ, ಶಿವ ಮತ್ತು ಪಾರ್ವತಿ ನಡುವೆ ಆದ ಪವಿತ್ರ ಪ್ರೇಮೋತ್ಸವದ ಐಕ್ಯತೆಯ ಬ್ರಹ್ಮಾನಂದವನ್ನು ವಿವರಿಸಲಾಗಿದೆ. ಮಹಾ ಋಷಿ ವಾತ್ಸಾಯಾನ ಕಾಮ ಸೂತ್ರ ಗ್ರಂಥದಲ್ಲಿ ಸಂಯಮದ ಪ್ರೀತಿ, ಪ್ರೇಮಾನುಬಂಧ, ದೇಹಾನಂದ, ಅಂಗಮರ್ಧನ, ಕಾಮೋದ್ರೇಕ, ನಲಿವಿನ ರಾಸ ಲೀಲೆ, ಲೈಂಗಿಕೋತ್ಸವ ಇತ್ಯಾದಿಗಳನ್ನ ಬಿಡಿಸಲಾಗಿದೆ. ಈ ಗ್ರಂಥವನ್ನು ವಿಜ್ಞಾನದ ಅಡಿ ನೋಡ ಬೇಕು. ಇಂತಹ ಪವಿತ್ರ ಪ್ರೇಮಾನುಭವಕ್ಕೆ ಸಮಯ, ಜಾಗ ಮತ್ತು ಸಂಯಮ ಅತ್ಯಮೂಲ್ಯ.

“ಕಾಮ ಕೇಳಿ” ಯೇ ಬೇರೆ. ಇದು ಅಶ್ಲೀಲ ಪದ. ಇದರ ಅರ್ಥ ತ್ವರಿತ ಮತ್ತು ತುರಿಕೆ. ಇಂದಿನ ಕಾಲಘಟ್ಟದಲ್ಲಿ ಜಾಗದ ಕೊರತೆ, ಸಮಯದ ಕೊರತೆ ಮತ್ತು ಸಂಯಮವೇ ಇಲ್ಲದೇ ಇರುವುದರಿಂದ ಮಿಲನ ಮಹೋತ್ಸವಗಳು ಕಾಮ ಕೇಳಿಗಳು ಆಗಿವೆ. ಅರ್ಥ ಮಾಡಿಕೊಳ್ಳುವುದು ಮತ್ತು ಮಾಡಿಕೊಳ್ಳದೇ ಇರುವುದು ಅವರವರ ಭಾವಕ್ಕೆ ಮತ್ತು ಅವರವರ ಭಕ್ತಿಗೆ.
ಇಂದಿನ ಕಾಲಘಟ್ಟದಲ್ಲಿ ‘ಫಲವತ್ತತೆಯ ಸೂಚ್ಯಂಕ ಅಥವ ಅಂಶವನ್ನು ನೋಡುವುದಾದರೆ ಗಂಡು ಹೆಣ್ಣು ಸಮಾನಾಂತರ, ಹೆಣ್ಣಿನ ಸಬಲೀಕರಣ, ಉನ್ನತ ಶಿಕ್ಷಣ, ಉದ್ಯೋಗ ಸೃಷ್ಟಿ, ಅಹಂಗಳ ಪರಮಾವಧಿ, ಸಮಯದ ಅಭಾವ, ತ್ವರಿತವಾಗಿ ಹಣ ಸಂಪಾದನೆಯ ಗುರಿ, ದೊಡ್ಡ ಹುದ್ದೆಯ ಹಂಬಲ, ಅಧಿಕ ಒತ್ತಡ, ಕಡಿಮೆ ಅನ್ನ ಅಂಶಗಳ ಅಹಾರ ಸೇವನೆ, ಸಂಸಾರ ಸಂಗಾತಿಗಳ ನಡುವೆ ಕ್ಷುಲ್ಲಕ ಕಾರಣಗಳಿಂದ ವಿರಸ, ಭರವಸೆ ನಂಬಿಕೆಗಳ ನೂನ್ಯತೆ, ಶರೀರ ವ್ಯಾಯಾಮ ಕುಂಠಿತ, ಬೊಜ್ಜಿನ ಸಮಸ್ಯೆ, ಹಾರ್ಮೋನ್ ವೈಪರಿತ್ಯ, ಐಷಾರಾಮಿ ಜೀವನ ಹೀಗೆ ಹಲವಾರು ಕಾರಣಗಳಿಂದ ವಿಚ್ಛೇದನಗಳು, ಮದುವೆ ಆಗದೇ ಒಂಟಿಯಾಗಿ ಇರುವುದು, ವೈವಾಹಿಕವಲ್ಲದ ಅಪವಿತ್ರ ಗಂಡು ಹೆಣ್ಣು ವಾಸ, ಸಪಿಂಡಗಳ ಜೊತೆಯ ಜೀವನ, ಮಗುವಾದರೆ ಹೋಣೆಗಾರಿಕೆಯ ಯೋಚನೆ, ಇವೆಲ್ಲಾ ಇರಬೇಕಾದರೆ ಇನ್ನೆಲ್ಲಿ ” ಫರ್ಟಲಿಟಿ ಕೋಶೆಂಟ್”….
ಮುಂದುವರರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] “ವಾತ್ಸಾಯಾನ – ಸಂಭೋಗ – ಸಂಯೋಗ – ಫಲವ… […]