ಕೆ.ಆರ್.ಪೇಟೆ: ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕೆ.ಆರ್.ಪೇಟೆ ತಾಲ್ಲೂಕು ಕೇಂದ್ರದಲ್ಲಿ ಭವ್ಯವಾದ ಸಾಹಿತ್ಯ ಭವನ ನಿರ್ಮಾಣಕ್ಕೆ ಸೂಕ್ತ ನಿವೇಶನ ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.

ಅವರು ಪಟ್ಟಣದ ಹೊರವಲಯದ ಪುರ ಗೇಟ್ ಬಳಿ ಇರುವ ಶ್ರೀ ಛಾಯಾದೇವಿ ಶಿಕ್ಷಣ ಸಂಸ್ಥೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ 37ನೇ ವರ್ಷದ ಶಾಲೆಗೊಂದು ಕಾರ್ಯಕ್ರಮ ಹಾಗೂ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಪರಿಚಯ ಮಾಸಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರಾಜ್ಯದ ಇತಿಹಾಸದಲ್ಲಿ ನವೆಂಬರ್ ತಿಂಗಳು ಪೂರ್ತಿ ಪ್ರತಿ ಪ್ರೌಢಶಾಲೆಯಲ್ಲಿ ಶಾಲೆಗೊಂದು ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿರುವ ಹಾಗೂ ಪ್ರತಿ ವರ್ಷವೂ ಒಬ್ಬೊಬ್ಬ ಸಾಹಿತಿಗಳ ಪರಿಚಯ ಮಾಡಿಸುವ ಕೆಲಸ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯವಾದುದು. ಕನ್ನಡದ ಕೆಲಸಕ್ಕೆ ತಾವು ಎಂದಿಗೂ ತನು ಮನ ಧನ ಅರ್ಪಿಸಿ ಕೈಜೋಡಿಸುತ್ತೇನೆ.
ನಮ್ಮ ತಾಲ್ಲೂಕು ಸಾಹಿತಿಗಳ ತವರೂರು ಆಗಿದೆ. ಗವೀಮಠದ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರರು, ಬಂಡಿಹೊಳೆ ರಂಗಸ್ವಾಮಿಭಟ್ಟರು, ಮೈಸೂರು ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ, ದೇವರು ಕೃತಿಯ ಎ.ಎನ್.ಮೂರ್ತಿರಾಯರು, ಅ.ರಾ.ಮಿತ್ರ, ಹೊಸಹೊಳಲು ಸುಜನಾ ಹೀಗೆ ಹತ್ತಾರು ಪ್ರಖ್ಯಾತ ಸಾಹಿತಿಗಳ ನಮ್ಮ ತಾಲ್ಲೂಕಿನ ಕೀರ್ತಿಯನ್ನು ಬೆಳಗಿಸಿದ್ದಾರೆ. ಇತ್ತೀಚಿನ ಸಾಹಿತಿಗಳಾದ ಶಿ.ಕುಮಾರಸ್ವಾಮಿ, ಕೆ.ಕಾಳೇಗೌಡರು, ಬಲ್ಲೇನಹಳ್ಳಿ ಮಂಜುನಾಥ್, ಮಾರೇನಹಳ್ಳಿ ಲೋಕೇಶ್, ಸವಿತರಮೇಶ್ ಸೇರಿದಂತೆ ಹಲವು ಸಾಹಿತಿಗಳು, ಬರಹಗಾರರು ನಮ್ಮ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇಂತಹ ಸಾಹಿತಿಗಳಿಗೆ ಜನ್ಮ ನೀಡಿರುವ ನಮ್ಮ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ ಮಾಡಲು ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ಮೂಲಕವು ಅಗತ್ಯ ನೆರವು ಪಡೆದು ಸಾಹಿತ್ಯ ಭವನ ನಿರ್ಮಾಣ ಮಾಡಲು ನಾನು ನನ್ನ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿ ಮೀರಾಶಿವಲಿಂಗಯ್ಯ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಾಹಿತಿ ಶಿ.ಕುಮಾರಸ್ವಾಮಿ ವಿಶೇಷ ಉಪನ್ಯಾಸ ನೀಡಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಆರ್.ಪೂರ್ಣಚಂದ್ರತೇಜಸ್ವಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತಿಗಳಾದ ಕೆ.ಅಣ್ಣೇಗೌಡ ಅವರ ರಚಿಸಿರುವ ಭಾರತ ಚೈತ್ರ ಪುಸ್ತಕವನ್ನು ಮಂಡ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹರ್ಷ ಪಣ್ಣೆದೊಡ್ಡಿ ಅವರು ಬಿಡುಗಡೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಕೆ.ಕಾಳೇಗೌಡ, ಕೆ.ಎಸ್.ಸೋಮಶೇಖರ್, ಸಾಹಿತಿ ಚಾ.ಶಿ.ಜಯಕುಮಾರ್, ಡಿ.ರಾಜೇಗೌಡ, ಛಾಯಾದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭಾನು ಪ್ರಕಾಶ್, ಕಾರ್ಯದರ್ಶಿ ಸವಿತ ರಮೇಶ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಲಕ್ಷö್ಮಣಗೌಡ, ಎಸ್.ಎಲ್.ಧರ್ಮಪ್ಪ, ಭಾರತ ಸೇವಾ ದಳದ ಅಧ್ಯಕ್ಷ ಚಂದ್ರಪ್ಪ, ವಿಜಿ ನಾರಾಯಣ್, ಕಸಾಪ ಗೌರವ ಕಾರ್ಯದರ್ಶಿ ಕಟ್ಟೆ ಮಹೇಶ್, ಕೋಶಾಧ್ಯಕ್ಷ ಎಸ್.ಎನ್.ಮಂಜೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಸವಿತ ರಮೇಶ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಬಿ.ಸಿ.ಚನ್ನೇಗೌಡ, ಪಿ.ಬಿ.ನಾಗರಾಜು, ಧರ್ಮರಾಜ್, ಕೆ.ಸಿ.ಪಾಪಯ್ಯ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರಶೀರ್ಷಿಕೆ:05.ಕೆ.ಆರ್.ಪಿ-04: ಕೆ.ಆರ್.ಪೇಟೆ: ಪಟ್ಟಣದ ಹೊರವಲಯದ ಪುರ ಗೇಟ್ ಬಳಿ ಇರುವ ಶ್ರೀ ಛಾಯಾದೇವಿ ಶಿಕ್ಷಣ ಸಂಸ್ಥೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ 37ನೇ ವರ್ಷದ ಶಾಲೆಗೊಂದು ಕಾರ್ಯಕ್ರಮ ಹಾಗೂ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಪರಿಚಯ ಮಾಸಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹೆಚ್.ಟಿ.ಮಂಜು ನೆರವೇರಿಸಿ ಮಾತನಾಡಿದರು. ಮತ್ತೊಂದು ಚಿತ್ರದಲ್ಲಿ ಭಾರತ ಚೈತ್ರ ಪುಸ್ತಕ ಬಿಡುಗಡೆ ಮಾಡಿದರು.
ವರದಿ : ಶ್ರೀನಿವಾಸ್ ಆರ್
