ಸಿರ್ಸಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಕಲಿ ಟ್ರಾಫಿಕ್ ಫೈನ್ ಸಂದೇಶಗಳು (SMS) ಹೆಚ್ಚಾಗಿ ಹರಡುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕೆಂದು ಸಿರ್ಸಿ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.
“ನಿಮ್ಮ ವಾಹನದ ಟ್ರಾಫಿಕ್ ಉಲ್ಲಂಘನೆ ಕ್ಯಾಮೆರಾದಲ್ಲಿ ದಾಖಲಾಗಿದೆ”, “ಫೈನ್ ಬಾಕಿ ಇದೆ, ತಕ್ಷಣ ಹಣ ಪಾವತಿಸದಿದ್ದರೆ ದಂಡ ಹೆಚ್ಚಾಗುತ್ತದೆ” ಎಂಬ ಭಯ ಹುಟ್ಟಿಸುವ ಸಂದೇಶಗಳನ್ನು ಕಳುಹಿಸಿ, ಅನಾಮಧೇಯ ಲಿಂಕ್ಗಳ ಮೇಲೆ ಕ್ಲಿಕ್ ಮಾಡುವಂತೆ ಮೋಸಗಾರು ಪ್ರಯತ್ನಿಸುತ್ತಿದ್ದಾರೆ. ಈ ಲಿಂಕ್ಗಳ ಮೂಲಕ ಹಣ ಕಳವು ಮಾಡುವ ಅಥವಾ ವೈಯಕ್ತಿಕ ಮಾಹಿತಿ ಪಡೆಯುವ ಸಾಧ್ಯತೆ ಇದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಇದನ್ನು ಓದಿ: ಬೆಂಗಳೂರಿಗರೆ ಎಚ್ಚರ! ಅತಿಯಾದ ಚಳಿಯಿಂದ ಸಾಂಕ್ರಾಮಿಕ ರೋಗಗಳ ಅಪಾಯ
ಈ ಕುರಿತು ಪ್ರತಿಕ್ರಿಯಿಸಿದ ಸಿರ್ಸಿ ಟ್ರಾಫಿಕ್ ಪೊಲೀಸ್ ಪಿಎಸ್ಐ ನಾಗರಾಜ್ ಭೋವಿ ಅವರು,“ಟ್ರಾಫಿಕ್ ದಂಡಕ್ಕೆ ಸಂಬಂಧಿಸಿದ ಅಧಿಕೃತ ಮಾಹಿತಿ ಕೇವಲ ಸರ್ಕಾರದ ಅಧಿಕೃತ ವೆಬ್ಸೈಟ್ ಅಥವಾ ನಿಗದಿತ ಚಾನಲ್ಗಳ ಮೂಲಕವೇ ಬರುತ್ತದೆ. ಅಪರಿಚಿತ ಸಂಖ್ಯೆಯಿಂದ ಬರುವ ಲಿಂಕ್ಗಳನ್ನು ಯಾವ ಕಾರಣಕ್ಕೂ ಕ್ಲಿಕ್ ಮಾಡಬೇಡಿ” ಎಂದು ತಿಳಿಸಿದ್ದಾರೆ.
ಯಾವುದೇ ಸಂದೇಹಾಸ್ಪದ ಸಂದೇಶ ಬಂದಲ್ಲಿ ತಕ್ಷಣವೇ ಸಮೀಪದ ಪೊಲೀಸ್ ಠಾಣೆ ಅಥವಾ ಟ್ರಾಫಿಕ್ ಪೊಲೀಸರನ್ನು ಸಂಪರ್ಕಿಸುವಂತೆ ಹಾಗೂ ಇಂತಹ ನಕಲಿ ಸಂದೇಶಗಳನ್ನು ಇತರರಿಗೂ ಹಂಚಿ ಜಾಗೃತಿ ಮೂಡಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
