ಕೊರಟಗೆರೆ:– ಕಲಿಕೆ ಎನ್ನುವುದು ಮಕ್ಕಳಿಗೆ ಭಾರವಾಗದೆ, ಹಬ್ಬದಂತೆ ಅನುಭವವಾಗಬೇಕು. ಅದಕ್ಕಾಗಿ ಇಲಾಖೆ ಕಲಿಕಾ ಹಬ್ಬಗಳನ್ನು ರೂಪಿಸಿದ್ದು, ಇದು ಮಕ್ಕಳಲ್ಲಿ ಆತ್ಮವಿಶ್ವಾಸ, ಸ್ವಯಂ ನಂಬಿಕೆ ಮತ್ತು ಕಲಿಕೆಯ ಮೇಲಿನ ಆಸಕ್ತಿಯನ್ನು ಹೆಚ್ಚಿಸುತ್ತದೆ, ಹಿಂದೆ ಕಲಿಕೆಯಲ್ಲಿ ಹಿಂದುಳಿದಿದ್ದ ಮಕ್ಕಳು ಇಂದು ವೇದಿಕೆ ಮೇಲೆ ಸಾಧಕರಾಗಿ ಕಾಣಿಸಿಕೊಳ್ಳುತ್ತಿರುವುದು ನಮ್ಮ ಶಿಕ್ಷಕರ ಶ್ರಮದ ಫಲ ಎಂದು ಬಿಇಓ ಪೈರೋಜ್ ಬೇಗಮ್ ಹೇಳಿದರು.
ತಾಲೂಕಿನ ತೋವಿನಕೆರೆ ಕ್ಲಸ್ಟರ್ ವ್ಯಾಪ್ತಿಯ ಎಫ್ಎಲ್ಎನ್ ಮಕ್ಕಳಿಗಾಗಿ ವಿಶೇಷ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ‘ನಾನು ಕಲಿಯಬಲ್ಲೆ’ ಎಂಬ ನಂಬಿಕೆಯನ್ನು ಇಲ್ಲಿ ಶಿಕ್ಷಕರು ಮಾಡಿದ್ದಾರೆ, ಶಿಕ್ಷಕರು, ಪೋಷಕರು ಮತ್ತು ಸಮುದಾಯ ಒಂದಾಗಿ ಕೆಲಸ ಮಾಡಿದರೆ ಪ್ರತಿಯೊಂದು ಮಗು ಕಲಿಕೆಯ ಬೆಳಕಿಗೆ ಬರಲಿದೆ ಮಕ್ಕಳಲ್ಲಿ ಮೂಲಭೂತ ಅಕ್ಷರಜ್ಞಾನ ಮತ್ತು ಸಂಖ್ಯಾಜ್ಞಾನವನ್ನು ಬಲಪಡಿಸುವ ಜೊತೆಗೆ ಕಲಿಕೆಯನ್ನು ಉತ್ಸವದ ರೂಪದಲ್ಲಿ ಹೃದಯಗಳಿಗೆ ತಲುಪಿಸುವ ಉದ್ದೇಶ ಈ ಕಾರ್ಯಕ್ರಮದಲ್ಲಿ ಸಾಕಾರಗೊಂಡಿದೆ ಎಂದರು.

.
ಕಾರ್ಯಕ್ರಮದಲ್ಲಿ ರಾಜ್ಯ ಆಯುಕ್ತರ ಕಚೇರಿಯಿಂದ ಎಸ್ಡಿಪಿಐ ಅಶ್ವಥ್ ನಾರಾಯಣ್, ಡಯಟ್ ಉಪನ್ಯಾಸಕರಾದ ಮಂಜುನಾಥ್, ಬಿಆರ್ಸಿ ರುದ್ರೇಶ್, ಶಿಕ್ಷಣ ಸಂಯೋಜಕರುಗಳಾದ ಮಂಜುನಾಥ್, ಗಿರೀಶ್, ಅನಸುಯಮ್ಮ, ಗಂಗಮ್ಮ, ರಾಜಶೇಖರ್, ಬಿಆರ್ಪಿ ಗಳಾದ ಅಶ್ವತ್ ನಾರಾಯಣ್, ದೊರೇಶ್, ಮಂಜುನಾಥ್, ಸಿಆರ್ ಪಿ ಹರೀಶ್ ಕುಮಾರ್ ಎಸ್ ,ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ್, ಗ್ರಾ.ಪಂ ಸದಸ್ಯ ನಾಗರಾಜು, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಪೋಷಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇದ್ದರು.
ವಿದ್ಯಾರ್ಥಿಗಳು ವಿವಿಧ ವೇಷಭೂಷಣಗಳಲ್ಲಿ ಆಗಮಿಸಿದ್ದು, ಅವರನ್ನು ಪೂರ್ಣ ಕುಂಭಗಳೊಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು. ವಿದ್ಯಾರ್ಥಿಗಳು ಬುದ್ಧಿ ಮಾತು ಮೂಲಕ ಸಿದ್ಧಪಡಿಸಿದ ಆತ್ಮವಿಶ್ವಾಸ ತುಂಬುವ ಹಾಡುಗಳಿಗೆ ನೃತ್ಯ ಪ್ರದರ್ಶನ ನೀಡಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಗಮನ ಸೆಳೆದ ಮಕ್ಕಳ ಕಲಿಕೆ:- ‘ಅಕ್ಷರಗಳ ಅರಮನೆ’, ‘ಎಬಿಸಿಡಿ ಟು ಕಾನ್ಫಿಡೆನ್ಸ್’, ‘ಅಂಕಿಗಳ ಆಟದ ಮೈದಾನ’, ‘ವಿಜ್ಞಾನ – ನಮ್ಮ ಜಗತ್ತು’ ಎಂಬ ಕಲಿಕಾ ಅಂಗಡಿಗಳನ್ನು ಸ್ಥಾಪಿಸಿ, ಮಕ್ಕಳಿಗೆ ಮೂಲಭೂತ ಅಕ್ಷರ ಮತ್ತು ಸಂಖ್ಯೆಗಳ ಅರಿವನ್ನು ಆಟೋಪಾಠದ ಮೂಲಕ ಕಲಿಸಲಾಯಿತು.
ವಿಶೇಷವಾಗಿ ವೇದಿಕೆಯಲ್ಲಿ, ಹಿಂದೆ ಕಲಿಕೆಯಲ್ಲಿ ಹಿಂದುಳಿದಿದ್ದು ನಿಧಾನ ಕಲಿಕೆಯನ್ನು ಹೊಂದಿದ್ದ ವಿದ್ಯಾರ್ಥಿಗಳು ಇಂದು ಅಬ್ದುಲ್ ಕಲಾಂ, ಐನ್ಸ್ಟೈನ್, ಥಾಮಸ್ ಅಲ್ವಾ ಎಡಿಸನ್, ಮ್ಯಾಡಂ ಕ್ಯೂರಿ, ಕುವೆಂಪು ಮುಂತಾದ ಮಹಾನ್ ವ್ಯಕ್ತಿಗಳ ಪಾತ್ರಗಳನ್ನು ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ವರದಿ- ಶ್ರೀನಿವಾಸ್, ಕೊರಟಗೆರೆ.
