ನವದೆಹಲಿ/ಹಾಸನ: ಕೇಂದ್ರ ಸರ್ಕಾರದ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ನಿಯೋಗವು, ಹಾಸನ ಜಿಲ್ಲೆ ಮತ್ತು ಕಾಶಿಗೆ ಇರುವ ಐತಿಹಾಸಿಕ ನಂಟಿಗೆ ಜೀವಂತ ಸಾಕ್ಷಿಯಾದ ಹೆಬ್ಬಾಲೆ ಶಾಸನ (Hebbale Inscription) ಪ್ರತಿಯನ್ನು ಸಚಿವರಿಗೆ ಅರ್ಪಿಸಿ, ಇದರ ಮಹತ್ವವನ್ನು ದೇಶದ ಪ್ರಧಾನಿಗಳಾಗಿಯೂ ಕಾಶಿ (ವಾರಣಾಸಿ) ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ಶ್ರೀ ನರೇಂದ್ರ ಮೋದಿಯವರ ಗಮನಕ್ಕೆ ತರಲು ವಿನಂತಿಸಿತು.
ಕಾಶಿ, ಬನಾರಸ್ ಅಥವಾ ವಾರಣಾಸಿ ಎಂದರೆ ಭಾರತೀಯರ ಧಾರ್ಮಿಕ-ಸಾಂಸ್ಕೃತಿಕ ಜೀವನದಲ್ಲಿ ಅತ್ಯಂತ ಪವಿತ್ರ ಸ್ಥಾನ ಹೊಂದಿರುವ ಕ್ಷೇತ್ರ. ಇಂತಹ ಕಾಶಿಗೆ ಕರ್ನಾಟಕದ ಹಾಸನ ಜಿಲ್ಲೆಯೊಂದಿಗಿನ ನಂಟನ್ನು ತೋರಿಸುವ ಅಪರೂಪದ ಐತಿಹಾಸಿಕ ದಾಖಲೆವೇ ಹೆಬ್ಬಾಲೆ ಶಾಸನವಾಗಿದೆ.
ಹಾಸನ ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಪುಟ್ಟ ಗ್ರಾಮ ಹೆಬ್ಬಾಲೆಯನ್ನು ಕಾಶಿ ವಿಶ್ವೇಶ್ವರ ದೇವರ ಪೂಜಾರ್ಥವಾಗಿ ದತ್ತಿನೀಡಲಾಗಿದೆ ಎಂಬುದನ್ನು ಈ ಶಾಸನ ವಿವರಿಸುತ್ತದೆ. ಇದು ಶಾಸನ ಸಂಖ್ಯೆ 181, ಎಪಿಗ್ರಾಫಿಯಾ ಕರ್ನಾಟಕ ಸಂಪುಟ 9ರಲ್ಲಿ ಉಲ್ಲೇಖಿತವಾಗಿದ್ದು, ಹೊಯ್ಸಳ ರಾಜ ಮೂರನೇ ನರಸಿಂಹನ (ಕ್ರಿ.ಶ.1279) ಕಾಲದ ತಾಮ್ರ ಶಾಸನವಾಗಿದೆ.
ಶಾಸನದ ಪ್ರಕಾರ, ಹೆಬ್ಬಾಲೆ ಗ್ರಾಮದ ಆದಾಯವಾದ 645 ಗದಾಣ್ಯಗಳಲ್ಲಿ, ವಾರಣಾಸಿಯಲ್ಲಿನ ಕ್ಷೇತ್ರವಾಸಿಗಳು ತುರುಕರಿಗೆ (ಮಹಮ್ಮದೀಯರಿಗೆ) ಸಲ್ಲಿಸಬೇಕಾದ **402 ಗದಾಣ್ಯ ತೆರಿಗೆ (ಹೂನ್ನಿನ ಕುಳ)**ವನ್ನು ಭರಿಸಿ, ಉಳಿದ 243 ಗದಾಣ್ಯಗಳನ್ನು ಕಾಶಿ ವಿಶ್ವೇಶ್ವರ ದೇವರ ನಿತ್ಯ ಪೂಜೆ, ಅಮೃತಪಡಿ, ನಂದಾದೀವಿಗೆ, ಆಚಾರ್ಯರು, ಪಾರುಪತ್ತೆಗಾರರು, ಭಿಕ್ಷೆ, ಬಾಣಸಿಗರು ಹಾಗೂ ಅಗ್ನಿಷ್ಟಿಕೆ ಸೇರಿದಂತೆ ಎಲ್ಲಾ ಧಾರ್ಮಿಕ ಕಾರ್ಯಗಳಿಗೆ ಆಚಂದ್ರಾರ್ಕವಾಗಿ ಬಳಸುವಂತೆ ಆದೇಶಿಸಲಾಗಿದೆ.
13ನೇ ಶತಮಾನದಲ್ಲಿ ಕಾಶಿ ವಿಶ್ವನಾಥ ದೇವಾಲಯವು ಸುಲ್ತಾನರ ಆಳ್ವಿಕೆಗೆ ಒಳಪಟ್ಟಿದ್ದ ಕ್ಲಿಷ್ಟ ರಾಜಕೀಯ ಪರಿಸ್ಥಿತಿಯಲ್ಲಿ, ಉತ್ತರ ಭಾರತದಿಂದ ಸುಮಾರು ಎರಡು ಸಾವಿರ ಕಿಲೋಮೀಟರ್ ದೂರದ ಹೊಯ್ಸಳ ಸಾಮ್ರಾಜ್ಯವು ಭಾಷೆ, ಧರ್ಮ, ಸಂಸ್ಕೃತಿ ಮತ್ತು ಭಾರತೀಯ ಶ್ರೇಷ್ಠತೆಯ ಭಾವನೆಯನ್ನು ಕಾಪಾಡಲು ಕೈಗೊಂಡ ಮಹತ್ವದ ಪ್ರಯತ್ನವನ್ನು ಈ ಶಾಸನ ಸ್ಪಷ್ಟವಾಗಿ ತೋರಿಸುತ್ತದೆ.
ಈ ಮೂಲಕ ಹಾಸನ ಜಿಲ್ಲೆ ಮತ್ತು ಕಾಶಿಯ ನಡುವಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಬಂಧಕ್ಕೆ ಹೆಬ್ಬಾಲೆ ಶಾಸನ ಅಪರೂಪದ ಸಾಕ್ಷಿಯಾಗಿದೆ ಎಂದು ನಿಯೋಗವು ತಿಳಿಸಿತು.
