ಕೊರಟಗೆರೆ :- ತಾಲೂಕಿನ ಎಲೆರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಗೊಲ್ಲಹಳ್ಳಿ ಮಜರೆ ಹನುಮನಾಯಕನ ಪಾಳ್ಯದಲ್ಲಿ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ನೀರಿಲ್ಲದೆ ಹಸು ಸಾವನ್ನಪ್ಪಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ಪಂಗಡ (ಎಸ್ಟಿ) ಸಮುದಾಯದ ಕುಟುಂಬಗಳು ವಾಸಿಸುವ ಈ ಗ್ರಾಮದಲ್ಲಿ ಸುಮಾರು 8 ರಿಂದ 10 ಮನೆಗಳಿಗೆ ಕಳೆದ ಹತ್ತು ದಿನಗಳಿಂದ ನೀರು ಸರಬರಾಜು ಆಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನೀರಿಗಾಗಿ ಮಹಿಳೆಯರು ಹಾಗೂ ಮಕ್ಕಳು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಾನವ ಜೀವನದ ಜೊತೆಗೆ ಜಾನುವಾರುಗಳ ಬದುಕೂ ಸಂಕಷ್ಟಕ್ಕೆ ಸಿಲುಕಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.
ಹನುಮನಾಯಕನ ಪಾಳ್ಯದ ನರಸಿಂಹಯ್ಯ ಅವರ ಮನೆಯಲ್ಲಿ ಸಾಕಲಾಗುತ್ತಿದ್ದ ಹಸು ಹಲವು ದಿನಗಳಿಂದ ನೀರಿನ ಕೊರತೆಯಿಂದ ಬಳಲುತ್ತಿತ್ತು ಎನ್ನಲಾಗಿದ್ದು, ಕೊನೆಗೆ ಅಸ್ವಸ್ಥಗೊಂಡ ಹಸು ಪ್ರತಿನಿತ್ಯ ಮೂರ್ನಾಲ್ಕು ಬಾರಿ ನೀರಿನಿಂದ ಮೈ ತೊಳೆಯುತ್ತಿದ್ದೆವು ಇತ್ತೀಚಿನ ನೀರಿನ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಯಾಗಿ ಸಾವನ್ನಪ್ಪಿದೆ ಎಂದು ಮಾಲಿಕ ಹಾಗೂ ಮನೆಯವರು ಗ್ರಾಮ ಪಂಚಾಯತಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹಲವು ಬಾರಿ ಎಲೆರಾಂಪುರ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ಯಾಂಕರ್ ಮೂಲಕವಾದರೂ ನೀರು ಒದಗಿಸಬೇಕಿತ್ತು. ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಗ್ರಾಮದ ಗಂಗಮ್ಮ ನರಸಿಂಹಯ್ಯ ಮಾತನಾಡಿ,ಕುಡಿಯಲು ಹಾಗೂ ದಿನಬಳಕೆಗೆ ನೀರಿಲ್ಲದೆ ಬಹಳಷ್ಟು ಸಮಸ್ಯೆ ಅನುಭವಿಸುತ್ತಿದ್ದೇವೆ, ಜಾನುವಾರುಗಳಿಗೆ ನೀರಿಲ್ಲ. ಮಕ್ಕಳು ಸಹ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಬಂದಿದೆ. ಹತ್ತು ದಿನಗಳಿಂದ ಪಂಚಾಯಿತಿ ಅಧಿಕಾರಿಗಳಿಗೆ ಹೇಳುತ್ತಿದ್ದೇವೆ. ಆದರೆ ಯಾರೂ ಗಮನ ಕೊಡಲಿಲ್ಲ ಎಂದು ಅಳಲು ತೋಡಿಕೊಂಡರು.
ನೀರಿನ ಸಮಸ್ಯೆ ವಿರುದ್ಧ ಸಾರ್ವಜನಿಕರು ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ಹೊರಹಾಕಿದ್ದು. ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಫಲವಾದರೆ ಜನರು ಬದುಕುವುದು ಹೇಗೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದ ನೀರಿನ ಸಮಸ್ಯೆ ಉಲ್ಬಣಗೊಂಡಿದೆ, ಸಮಸ್ಯೆಯನ್ನ ತಿಳಿಗೊಳಿಸಬೇಕಾದಂತ ಗ್ರಾಮ ಪಂಚಾಯತಿ ಅಧಿಕಾರಿಗಳು ಕಳೆದ ಹತ್ತು ದಿನಗಳಿಂದ ಈ ಗ್ರಾಮದ ಕಡೆ ತಲೆ ಹಾಕದೇ ಇರುವುದು ಮತ್ತಷ್ಟು ಸಮಸ್ಯೆ ಉಲ್ಬಣ್ಣ ಗೊಂಡಿದ್ದು , ನೀರಿನ ಸಮಸ್ಯೆಯಿಂದ ಜಾನುವಾರು ಸಾವು ಸಂಭವಿಸಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ತಕ್ಷಣ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಹಸು ಸಾವಿಗೆ ಪರಿಹಾರ ನೀಡಬೇಕು ಎಂದು ನರಸಿಂಹಯ್ಯ, ಗಂಗಮ್ಮ ,ತಿಮ್ಮಕ್ಕ, ನವೀನ್ ಆಗ್ರಹಿಸಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ.
