ಶ್ಲೋಕ – 52 & 53
ಭಗವಾನುವಾಚ ।
ಸುದುರ್ದರ್ಶಮಿದಂ ರೂಪಂ ದೃಷ್ಟವಾನಸಿ ಯನ್ಮಮ ।
ದೇವಾ ಅಪ್ಯಸ್ಯ ರೂಪಸ್ಯ ನಿತ್ಯಂ ದರ್ಶನಕಾಂಕ್ಷಿಣಃ ॥೫೨॥
ನಾಹಂ ವೇದೈರ್ನ ತಪಸಾ ನ ದಾನೇನ ನ ಚೇಜ್ಯಯಾ ।
ಶಕ್ಯ ಏವಂವಿಧೋ ದ್ರಷ್ಟುಂ ದೃಷ್ಟವಾನಸಿ ಮಾಂ ಯಥಾ ॥೫೩॥
ಭಗವಾನುವಾಚ-ಭಗವಂತ ಹೇಳಿದನು :
ಸುದುರ್ದರ್ಶಮ್ ಇದಮ್ ರೂಪಮ್ ದೃಷ್ಟವಾನ್ ಅಸಿ ಯತ್ ಮಮ ।
ದೇವಾಃ ಅಪಿ ಅಸ್ಯ ರೂಪಸ್ಯ ನಿತ್ಯಮ್ ದರ್ಶನ ಕಾಂಕ್ಷಿಣಃ ||
ನ ಅಹಂ ವೇದೈಃ ನ ತಪಸಾ ನ ದಾನೇನ ನ ಚ ಇಜ್ಯಯಾ ।
ಶಕ್ಯಃ ಏವಂ ವಿಧಃ ದ್ರಷ್ಟುಮ್ ದೃಷ್ಟವಾನ್ ಅಸಿ ಮಾಮ್ ಯಥಾ ––ನೀನು ಕಂಡ ನನ್ನ ಈ ರೂಪ ಸುಲಭವಾಗಿ ಕಾಣಬರುವಂಥದಲ್ಲ. ದೇವತೆಗಳು ಕೂಡ ಈ ರೂಪವನ್ನು ಕಾಣಲೆಂದು ಅನುಗಾಲ ಕಾಯುತ್ತಿರುತ್ತಾರೆ.
ನೀನು ಕಂಡ ಹಾಗೆ ಈ ಬಗೆಯ ನನ್ನನ್ನು ಕಾಣಲು ಬರಿದೆ ವೇದಗಳನ್ನೋದುವುದರಿಂದ ಸಾಧ್ಯವಿಲ್ಲ. ಇಲ್ಲ ತಪಸ್ಸಿನಿಂದ, ಇಲ್ಲ ದಾನದಿಂದ, ಇಲ್ಲ ಯಜ್ಞದಿಂದಲೂ.
ಭಗವಂತ ಅರ್ಜುನನಿಗೆ ಕಾಣಿಸಿದ ತನ್ನ ಅಪೂರ್ವ ರೂಪ ಬಹಳ ದುರ್ಲಭರೂಪ. ಇಂಥಹ ಅಪೂರ್ವ ರೂಪವನ್ನು ಕಾಣಲು ದೇವತೆಗಳೂ ಕೂಡ ಆಸೆಯಿಂದ ಅನುಗಾಲ ಕಾಯುತ್ತಿರುತ್ತಾರೆ. ಕೃಷ್ಣ ಇಲ್ಲಿ ಮತ್ತೆ ಒತ್ತು ಕೊಟ್ಟು ಹಿಂದೆ ಹೇಳಿದ ವಿಚಾರವನ್ನು ಮರಳಿ ಹೇಳುತ್ತಾನೆ. “ಸ್ವಸಾಮರ್ಥ್ಯದಿಂದ(ವೇದಾಧ್ಯಾಯನ, ಯಜ್ಞ, ದಾನ, ತಪಸ್ಸು ಇತ್ಯಾದಿ ಕರ್ಮಗಳನ್ನು ಮಾಡುವ ಮುಖೇನ) ನನ್ನ ಈ ವಿಶಿಷ್ಠ ರೂಪವನ್ನು ಕಾಣಲು ಸಾಧ್ಯವಿಲ್ಲ”ಎನ್ನುತ್ತಾನೆ ಕೃಷ್ಣ.
