ಹಾಸನ: ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿ ವ್ಯಾಪ್ತಿಯ ಮಾವಿನಕೆರೆ ಗ್ರಾಮದಲ್ಲಿ ಮಹಿಳೆಯೊಬ್ಬರು ಮಾಡಿರುವ ಆರೋಪಗಳ ಹಿನ್ನೆಲೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ತೇಜಸ್ವಿನಿ ಎಂಬ ಮಹಿಳೆ ತಮ್ಮ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳು ಸಂಪೂರ್ಣ ಸುಳ್ಳು, ದುರುದ್ದೇಶಪೂರಿತ ಹಾಗೂ ಆಧಾರರಹಿತ ಎಂದು ಗ್ರಾಮಸ್ಥರಾದ ಮಧು, ಶಿವಯ್ಯ, ಪ್ರಸನ್ನ ಸೇರಿದಂತೆ ಇತರರು ತೀವ್ರವಾಗಿ ಪ್ರತಿಕ್ರಿಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಗ್ರಾಮಸ್ಥರು, ನಾವು ನಮ್ಮ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುಂಠಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದೇವೆ. ಆದರೆ ತೇಜಸ್ವಿನಿ ಅವರು ಹಗಲು-ರಾತ್ರಿ ಎನ್ನದೆ ತಮ್ಮ ಎಮ್ಮೆ ಹಾಗೂ ದನಗಳನ್ನು ನಮ್ಮ ತೋಟಗಳಿಗೆ ಬಿಡುತ್ತಿದ್ದು, ಬೆಳೆಗಳಿಗೆ ಭಾರೀ ಹಾನಿ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನು ಪ್ರಶ್ನಿಸಲು ಹೋದಾಗ ಕಲ್ಲು ತೂರಾಟ ನಡೆಸುವುದು, ಕಾರ್ಮಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸೇರಿದಂತೆ ಅಸಭ್ಯ ವರ್ತನೆ ತೋರಿಸುತ್ತಾರೆ ಎಂದು ದೂರಿದರು. ತೇಜಸ್ವಿನಿ ಅವರ ತಾಯಿ ಯಶೋಧ ಕೂಡ ಸಣ್ಣಪುಟ್ಟ ವಿಚಾರಕ್ಕೂ ಜಗಳವಾಡಲು ಮುಂದಾಗುತ್ತಾರೆ ಎಂದು ಆರೋಪಿಸಿದ ಗ್ರಾಮಸ್ಥರು, ಅಕ್ಕಪಕ್ಕದ ಜಮೀನಿನವರಿಗೆ ಉದ್ದೇಶಪೂರ್ವಕವಾಗಿ ತೊಂದರೆ ನೀಡುತ್ತಾ, ಅವರ ಜಮೀನು ಪಾಳು ಬೀಳುವಂತೆ ಮಾಡಿ ಬಳಿಕ ಅಲ್ಲಿ ತಮ್ಮ ದನಗಳನ್ನು ಮೇಯಿಸುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ ಎಂದು ಹೇಳಿದರು. ಗ್ರಾಮದಲ್ಲಿ ಅವರ ದೌರ್ಜನ್ಯ ಹಾಗೂ ದಬ್ಬಾಳಿಕೆ ಹೆಚ್ಚಾಗಿದ್ದು, ಹಲವಾರು ರೈತರು ಭಯಭೀತರಾಗಿದ್ದಾರೆ ಎಂದು ಅವರು ಅಳಲು ತೋಡಿಕೊಂಡರು. ತೋಟಗಳಿಗೆ ಹೋಗುವಾಗ ಖಾರದ ಪುಡಿ ಹಿಡಿದುಕೊಂಡು ಬರುತ್ತಾರೆ. ಕಾರ್ಮಿಕರನ್ನು, ವಿಶೇಷವಾಗಿ ದಲಿತ ಕಾರ್ಮಿಕರನ್ನು ಜಾತಿ ಆಧಾರಿತವಾಗಿ ನಿಂದಿಸುತ್ತಾರೆ. ಇದರಿಂದ ಕಾರ್ಮಿಕರು ಕೆಲಸಕ್ಕೆ ಬರಲು ಹೆದರುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಇನ್ನೂ, ತೇಜಸ್ವಿನಿ ಅವರು ಮಾಡಿರುವ ಕಳವು ಆರೋಪಗಳನ್ನೂ ಗ್ರಾಮಸ್ಥರು ತಳ್ಳಿಹಾಕಿದರು. “ಮೋಟಾರ್ ವೈಯರ್ ಸೇರಿದಂತೆ ಕೆಲವು ವಸ್ತುಗಳನ್ನು ನಾವು ಕಳವು ಮಾಡಿದ್ದೇವೆ ಎಂಬ ಆರೋಪ ಸಂಪೂರ್ಣ ಸುಳ್ಳು. ಆ ವಸ್ತುಗಳೆಲ್ಲವೂ ಅವರ ಮನೆಯಲ್ಲೇ ಇವೆ. ಸುಳ್ಳು ಆರೋಪಗಳನ್ನು ಮಾಡುತ್ತಾ ನಮಗೆ ಕಿರುಕುಳ ನೀಡುತ್ತಿದ್ದಾರೆ,” ಎಂದು ಸ್ಪಷ್ಟಪಡಿಸಿದರು.
ಶಿವಯ್ಯ ಮಾತನಾಡಿ, ತಾಯಿ-ಮಗಳು ಮಾತೆತ್ತಿದರೆ ಸಾಕು ಹಣಕ್ಕಾಗಿ ಇಲ್ಲಸಲ್ಲದ ದೂರುಗಳನ್ನು ಕೊಡುತ್ತಾರೆ. ಅವರ ಬೆದರಿಕೆ ಹಾಗೂ ಹಿಂಸೆ ತಾಳಲಾರದೆ ಕೆಲವರು ಊರು ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ಅವರಿಂದ ಯಾವುದೇ ಹಣ ಪಡೆದಿಲ್ಲ ಎಂದು ಹೇಳಿದರು. ಯಾರಾದರೂ ಅವರ ವಿರುದ್ಧ ಮಾತನಾಡಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಮಾತೆತ್ತಿದರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಾರೆ. ಸುಳ್ಳು ಪ್ರಕರಣಗಳನ್ನು ಹಾಕಿ ಜನರನ್ನು ಹೆದರಿಸುವುದು ಅವರ ಸಾಮಾನ್ಯ ಕ್ರಮವಾಗಿದೆ ಎಂದು ದೂರಿದರು. ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ಸ್ಥಳೀಯರು ಹೇಳುವ ಪ್ರಕಾರ, ಈ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದ್ದು, ಶಾಂತಿಯುತ ವಾತಾವರಣಕ್ಕೆ ಧಕ್ಕೆ ಉಂಟಾಗಿದೆ. ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ವಿಚಾರಣೆ ನಡೆಸಿ ಸತ್ಯಾಸತ್ಯತೆ ತಿಳಿದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ. “ನಮಗೆ ನ್ಯಾಯ ಸಿಗಬೇಕು, ನಮ್ಮ ಬೆಳೆ ಹಾಗೂ ಜೀವನೋಪಾಯ ರಕ್ಷಿಸಬೇಕು,” ಎಂದು ಅವರು ಮನವಿ ಮಾಡಿದರು. ಪ್ರಕರಣದ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವ ನಿರೀಕ್ಷೆಯಲ್ಲಿರುವ ಗ್ರಾಮಸ್ಥರು, ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗಬೇಕು ಎಂದು ಆಶಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ಕಮಲ, ಮಂಜುಳ ಇತರರು ಉಪಸ್ಥಿತರಿದ್ದರು.
