ಬೆಂಗಳೂರು, ಜುಲೈ 15, 2026: ಬೆಂಗಳೂರಿನ ಆಸ್ತಿದಾರರ ಬಹುದಿನಗಳ ಕನಸಾಗಿದ್ದ ಆಸ್ತಿ ಸಂರಕ್ಷಣೆ ಮತ್ತು ವಹಿವಾಟಿನಲ್ಲಿ ಆಗುವ ವಂಚನೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೃಹತ್ ಕ್ರಮಕ್ಕೆ ಮುಂದಾಗಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಕಂದಾಯ ವಿಭಾಗದ ಮಹತ್ವದ ಉನ್ನತ ಮಟ್ಟದ ಸಭೆ ನಡೆಸಿದ್ದು, ಬೆಂಗಳೂರಿನ ಸುಮಾರು 23 ಲಕ್ಷ ಆಸ್ತಿಗಳಿಗೆ ಸರ್ಕಾರದಿಂದಲೇ ನೇರವಾಗಿ ಮನೆ-ಮನೆಗೆ ಇ-ಖಾತೆಗಳನ್ನು (E-Khata) ವಿತರಿಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಈ ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಸೇರಿದಂತೆ ಹಲವು ಹಿರಿಯ ಐಎಎಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಆಸ್ತಿ ತೆರಿಗೆ ಹೆಚ್ಚಳ ಮತ್ತು ತಂತ್ರಜ್ಞಾನದ ಬಳಕೆ
ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಪ್ರತಿಯೊಂದು ಸ್ವತ್ತನ್ನು ತೆರಿಗೆ ವ್ಯಾಪ್ತಿಗೆ ತರಲು ಸರ್ಕಾರ ನಿರ್ಧರಿಸಿದೆ. ಕಡಿಮೆ ಆಸ್ತಿ ತೆರಿಗೆ ಪಾವತಿಸುತ್ತಿರುವ ಪ್ರಕರಣಗಳನ್ನು ಪತ್ತೆಹಚ್ಚಿ ತೆರಿಗೆ ಪರಿಷ್ಕರಣೆ ಮಾಡಲು ಸೂಚಿಸಲಾಗಿದೆ. ಇದಕ್ಕಾಗಿ ಬೆಸ್ಕಾಂ (BESCOM), ಜಲಮಂಡಳಿ (BWSSB) ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ಆಸ್ತಿಗಳ ಮಾಹಿತಿಯನ್ನು ಜಿಐಎಸ್ (GIS), ಡ್ರೋನ್ ತಂತ್ರಜ್ಞಾನ ಬಳಸಿ ಏಕೀಕರಿಸಲಾಗುವುದು.
ಸಭೆಯಲ್ಲಿ ಕೈಗೊಳ್ಳಲಾದ ಪ್ರಮುಖ ತೀರ್ಮಾನಗಳು:
-
ಬಿ-ಖಾತೆಯಿಂದ ಎ-ಖಾತೆಗೆ ಪರಿವರ್ತನೆ: ಆಸ್ತಿದಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ‘ಬಿ-ಖಾತೆಯಿಂದ ಎ-ಖಾತೆಗೆ’ ಪರಿವರ್ತನೆ ಮಾಡುವ ಪ್ರಕ್ರಿಯೆಗೆ ಹೆಚ್ಚಿನ ವೇಗ ನೀಡಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ.
-
ಅನಧಿಕೃತ ಡಿಜಿಟಲ್ ಜಾಹೀರಾತು ತೆರವು: ನಗರದಲ್ಲಿ ಹೊಸ ಜಾಹೀರಾತು ನೀತಿ ಜಾರಿಗೆ ಬಂದ ನಂತರ ಪರವಾನಗಿ ಇಲ್ಲದೆ ಅಳವಡಿಸಲಾಗಿರುವ ಅನಧಿಕೃತ ಡಿಜಿಟಲ್ ಜಾಹೀರಾತುಗಳನ್ನು ಯಾವುದೇ ಮುಲಾಜಿಲ್ಲದೆ ತಕ್ಷಣವೇ ತೆರವುಗೊಳಿಸಲು ಸೂಚಿಸಲಾಗಿದೆ.
-
ತ್ಯಾಜ್ಯ ವಿಲೇವಾರಿ ವಾಹನಗಳಿಗೆ ಜಿಪಿಎಸ್ ಕಡ್ಡಾಯ: ಕಟ್ಟಡ ಭಗ್ನಾವಶೇಷಗಳನ್ನು (Debris) ವಿಲೇವಾರಿ ಮಾಡುವ ಎಲ್ಲಾ ವಾಹನಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಹಾಗೂ ಜಿಪಿಎಸ್ (GPS) ಅಳವಡಿಸುವುದು ಕಡ್ಡಾಯವಾಗಿದೆ.
ಆಗಸ್ಟ್ ತಿಂಗಳಲ್ಲಿ “ಕಸದಿಂದ ಸ್ವಾತಂತ್ರ್ಯ” ಬೃಹತ್ ಅಭಿಯಾನ
ಬೆಂಗಳೂರಿನ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಗಸ್ಟ್ ತಿಂಗಳ ಪೂರ್ತಿ “ಕಸದಿಂದ ಸ್ವಾತಂತ್ರ್ಯ” (Freedom from waste) ಅಭಿಯಾನವನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ವತಿಯಿಂದ 1,616 ಸ್ಥಳಗಳಲ್ಲಿ ಗುರುತಿಸಲಾಗಿರುವ ಸುಮಾರು 22,732 ಟನ್ ತ್ಯಾಜ್ಯವನ್ನು ಬಿಬಿಎಂಪಿ, ಕೆ-ರೈಡ್, ರೈಲ್ವೆ ಹಾಗೂ ಮೆಟ್ರೋ ಇಲಾಖೆಗಳ ಜಂಟಿ ಸಮನ್ವಯದೊಂದಿಗೆ ಸಂಪೂರ್ಣವಾಗಿ ತೆರವುಗೊಳಿಸಲಾಗುವುದು.
ಖಾಲಿ ನಿವೇಶನಗಳ ಮಾಲೀಕರಿಗೆ ಆಗಸ್ಟ್ 15 ರ ಗಡುವು
ಬೆಂಗಳೂರಿನಲ್ಲಿರುವ ಖಾಲಿ ಜಾಗಗಳಲ್ಲಿ ಬೆಳೆದಿರುವ ಕಳೆ, ಗಿಡ-ಗಂಟಿಗಳು ಹಾಗೂ ತ್ಯಾಜ್ಯವನ್ನು ಸ್ವತ್ತಿನ ಮಾಲೀಕರೇ ಸ್ವತಃ ಸ್ವಚ್ಛಗೊಳಿಸಿಕೊಳ್ಳಲು ಆಗಸ್ಟ್ 15, 2026 ರವರೆಗೆ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಮಾಲೀಕರು ಸ್ವಚ್ಛಗೊಳಿಸದಿದ್ದರೆ, ಪಾಲಿಕೆಯೇ ಅದನ್ನು ಸ್ವಚ್ಛಗೊಳಿಸಿ, ಅದಕ್ಕೆ ತಗುಲಿದ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ಸೇರಿಸಿ ಮಾಲೀಕರಿಂದಲೇ ವಸೂಲಿ ಮಾಡಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.
ಪಾದಚಾರಿ ಮಾರ್ಗ ಒತ್ತುವರಿ ಮಾಡಿದರೆ ದುಪ್ಪಟ್ಟು ದಂಡ!
ಬೆಂಗಳೂರಿನಾದ್ಯಂತ ಈಗಾಗಲೇ 10,000 ಕ್ಕೂ ಹೆಚ್ಚು ಅಂಗಡಿಗಳ ವಿವಿಧ ರೀತಿಯ ಒತ್ತುವರಿಗಳನ್ನು ತೆರವುಗೊಳಿಸಲಾಗಿದ್ದು, ಕೇವಲ 1,500 ಬೀದಿ ವ್ಯಾಪಾರಿಗಳಿಗೆ ಮಾತ್ರ ಸ್ಥಳಾಂತರದ ಅಗತ್ಯವಿದೆ. ಪಾದಚಾರಿ ಮಾರ್ಗಗಳನ್ನು (Footpaths) ಮುಕ್ತಗೊಳಿಸಿದ ನಂತರ ಮತ್ತೆ ಒತ್ತುವರಿ ಮಾಡಿದರೆ ಅಂತಹವರಿಗೆ ದುಪ್ಪಟ್ಟು ದಂಡ ವಿಧಿಸಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
