ವಾಷಿಂಗ್ಟನ್ ಡಿ.ಸಿ.: ಅಮೆರಿಕಾದ ಪ್ರತಿಷ್ಠಿತ 2026ರ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀಯಲ್ಲಿ ಭಾರತೀಯ ಮೂಲದ 14 ವರ್ಷದ ವಿದ್ಯಾರ್ಥಿ ಶ್ರೇ ಪಾರಿಖ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕ್ಯಾಲಿಫೋರ್ನಿಯಾದ ರಾಂಚೋ ಕುಕಮೋಂಗಾ ಮೂಲದ ಶ್ರೇ ಪಾರಿಖ್ ಮೇ 28ರಂದು ನಡೆದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದರು.
98ನೇ ವಾರ್ಷಿಕ ಸ್ಪರ್ಧೆಯನ್ನು ವಾಷಿಂಗ್ಟನ್ ಡಿ.ಸಿಯ DAR Constitution Hall ನಲ್ಲಿ ಆಯೋಜಿಸಲಾಗಿತ್ತು. ಅಮೆರಿಕಾದ ಎಲ್ಲಾ 50 ರಾಜ್ಯಗಳು, ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ, ಗುವಾಮ್, ಪ್ಯುರ್ಟೋ ರಿಕೊ, ಯು.ಎಸ್. ವರ್ಜಿನ್ ದ್ವೀಪಗಳು, ರಕ್ಷಣಾ ಇಲಾಖೆ ಶಾಲೆಗಳು ಹಾಗೂ ಐದು ಇತರೆ ದೇಶಗಳಿಂದ ಸುಮಾರು 250 ಸ್ಪರ್ಧಿಗಳು ಭಾಗವಹಿಸಿದ್ದರು.
ಫೈನಲ್ನಲ್ಲಿ ಶ್ರೇ ಪಾರಿಖ್, ನ್ಯೂ ಜರ್ಸಿಯ ಜರ್ಸಿ ಸಿಟಿಯ 12 ವರ್ಷದ ಇಶಾನ್ ಗುಪ್ತ ಅವರನ್ನು “ಸ್ಪೆಲ್-ಆಫ್” ಟೈಬ್ರೇಕರ್ ಸುತ್ತಿನಲ್ಲಿ ಸೋಲಿಸಿದರು. 90 ಸೆಕೆಂಡುಗಳ ವೇಗದ ಸುತ್ತಿನಲ್ಲಿ ಶ್ರೇ 32 ಪದಗಳನ್ನು ಸರಿಯಾಗಿ ಉಚ್ಚರಿಸಿದರೆ, ಇಶಾನ್ 25 ಪದಗಳನ್ನು ಸರಿಯಾಗಿ ಉಚ್ಚರಿಸಿದರು. ಇದು ಸ್ಪರ್ಧೆಯ ಸ್ಪೆಲ್-ಆಫ್ ಮಾದರಿಯಲ್ಲಿ ಹೊಸ ದಾಖಲೆ ಎನಿಸಿದೆ.
ಶ್ರೇ ಪಾರಿಖ್ ಗೆಲುವಿನ ಪದವಾಗಿ “ಬ್ರೊಮೊಕ್ರಿಪ್ಟಿನ್” (Bromocriptine) ಎಂಬ ಪದವನ್ನು ಸರಿಯಾಗಿ ಉಚ್ಚರಿಸಿದರು. ಸ್ಕ್ರಿಪ್ಸ್ ಪ್ರಕಾರ ಇದು ಎರ್ಗಾಟ್ನಿಂದ ಉತ್ಪತ್ತಿಯಾಗುವ ಮತ್ತು ಡೋಪಮೈನ್ ಕ್ರಿಯೆಯನ್ನು ಅನುಕರಿಸುವ ಒಂದು ರಾಸಾಯನಿಕ ಸಂಯೋಗವಾಗಿದೆ.
ವಿಜೇತರಿಗೆ 50 ಸಾವಿರ ಅಮೆರಿಕನ್ ಡಾಲರ್ ನಗದು ಬಹುಮಾನ, ಸ್ಕ್ರಿಪ್ಸ್ ಕಪ್, ಸ್ಮರಣಿಕೆ ಪದಕ, ಮೆರಿಯಂ-ವೆಬ್ಸ್ಟರ್ ವತಿಯಿಂದ 2,500 ಡಾಲರ್, ಡೆಲ್ಟಾ ಏರ್ಲೈನ್ಸ್ನಿಂದ 1,000 ಡಾಲರ್ ವಿಮಾನ ಪ್ರಯಾಣ ಕ್ರೆಡಿಟ್ ಹಾಗೂ ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ ಪ್ರಕಟಣೆಗಳ ಸಂಗ್ರಹವನ್ನು ಬಹುಮಾನವಾಗಿ ನೀಡಲಾಯಿತು.
ಶ್ರೇ ಪಾರಿಖ್ ಈ ಹಿಂದೆ 2024ರಲ್ಲಿ ಮೂರನೇ ಸ್ಥಾನ ಹಾಗೂ 2022ರಲ್ಲಿ 89ನೇ ಸ್ಥಾನ ಪಡೆದಿದ್ದರು. 2025ರಲ್ಲಿ ಜ್ವರದಿಂದ ಬಳಲುತ್ತಿದ್ದ ವೇಳೆ ತಮ್ಮ ಶಾಲಾ ಮಟ್ಟದ ಸ್ಪೆಲ್ಲಿಂಗ್ ಸ್ಪರ್ಧೆಯಲ್ಲಿ ಸೋತಿದ್ದರು ಎಂಬುದು ವಿಶೇಷ.
ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಅಮೆರಿಕಾದ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆಯುವ ಅತ್ಯಂತ ಪ್ರಸಿದ್ಧ ಪದ ಉಚ್ಚಾರಣಾ ಸ್ಪರ್ಧೆಗಳಲ್ಲೊಂದು ಎಂದು ಪರಿಗಣಿಸಲಾಗಿದೆ.
