ನವದೆಹಲಿ: ಭಾರತದ ಉತ್ತರ ಪ್ರದೇಶ ರಾಜ್ಯದ ಬುಂದೇಲ್ಖಂಡ್ ಪ್ರದೇಶದಲ್ಲಿರುವ ಬಂಡಾ ನಗರವು ವಿಶ್ವದಲ್ಲೇ ಅತ್ಯಂತ ಬಿಸಿ ನಗರ ಎಂಬ ಕುಖ್ಯಾತಿಗೆ ಸುದ್ದಿಯಾಗಿದೆ.
ಕೆಲವು ವರ್ಷಗಳಿಂದ ದಾಖಲೆಯ ಮಟ್ಟದ ಉಷ್ಣಾಂಶ ಅನುಭವಿಸುತ್ತಿರುವ ಬಂಡಾ ನಗರದಲ್ಲಿ ಇತ್ತೀಚೆಗೆ 47.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಏಪ್ರಿಲ್ 27 ಹಾಗೂ ಮೇ ತಿಂಗಳಲ್ಲಿ ವಿಶ್ವದ ಅತ್ಯಂತ ಬಿಸಿ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ ಎಂದು ವರದಿಯಾಗಿದೆ. ಇದು ಎರಡನೇ ಬಾರಿಗೆ ಈ ಮಟ್ಟದ ಉಷ್ಣತೆಗಾಗಿ ಜಾಗತಿಕ ಗಮನ ಸೆಳೆದಿದೆ.
ತಜ್ಞರ ಪ್ರಕಾರ, ಬಂಡಾ ನಗರದಲ್ಲಿ ತೀವ್ರ ಬಿಸಿಗೆ ಹಲವು ಕಾರಣಗಳಿವೆ. ಕಡಿಮೆ ಮರಗಳು, ಒಣ ವಾತಾವರಣ, ಬಂಡೆ ಪ್ರದೇಶಗಳ ಅಧಿಕತೆ ಹಾಗೂ ನೀರಿನ ಕೊರತೆ ಉಷ್ಣತೆಯನ್ನು ಹೆಚ್ಚಿಸುತ್ತಿವೆ. ಜೊತೆಗೆ ಹವಾಮಾನ ಬದಲಾವಣೆ ಮತ್ತು ಉತ್ತರ ಭಾರತದ ತೀವ್ರ ಹೀಟ್ವೇವ್ ಪರಿಸ್ಥಿತಿಯೂ ಪ್ರಮುಖ ಕಾರಣಗಳಾಗಿವೆ.
ಬುಂದೇಲ್ಖಂಡ್ ಪ್ರದೇಶದಲ್ಲಿ ಮಳೆಯ ಕೊರತೆ ಮತ್ತು ಅರಣ್ಯ ನಾಶದಿಂದ ಪರಿಸರ ಸಮತೋಲನ ಹದಗೆಟ್ಟಿದ್ದು, ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತೀವ್ರ ಬಿಸಿಲಿನಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
