ನನ್ನ ಮೊದಲನೆ ಸಾಗರೋತ್ತರ ಪ್ರವಾಸ ಕೊರೋನ ಪೂರ್ವ ಆಸ್ಟ್ರೇಲಿಯ ಮತ್ತು ನ್ಯೂಝಿಲ್ಯಾಂಡ್ ದೇಶಗಳಿಗೆ ಹೋಗಿದ್ದು. ನ್ಯೂಝಿಲ್ಯಾಂಡ್ ದೇಶವನ್ನು ಅಲ್ಲಿಯ ದೇಶೀಯ ಮಾವೋರಿ ಭಾಷೆಯಲ್ಲಿ “ಅಯಿಟೋರೊವ” ಎಂದು ಕರೆಯುತ್ತಾರೆ. ಅಂದರೆ ಆ ದೇಶದ ಮೇಲೆ ಯಾವಾಗಲು ಬಿಳಿ ಮೋಡಗಳು ಮುಚ್ಚಿರುತ್ತೆ ಎಂಬುದು. ಇಂಗ್ಲಿಷ್ನಲ್ಲಿ ನ್ಯೂಝಿಲ್ಯಾಂಡ್ ಅಂದರೆ ” ನ್ಯೂ ಲ್ಯಾಂಡ್” ಅಂತ. ಸಾವಿರಾರು ವರ್ಷಗಳ ಹಿಂದೆ ಆದ ಬೃಹತ್ತಾದ ಜ್ವಾಲಾಮುಖಿಯಿಂದ ಅನಾವರಣಗೊಂಡ ಹೊಸ ದ್ವೀಪ ಈ ನ್ಯೂಝಿಲ್ಯಾಂಡ್. ಈ ಕಾರಣದಿಂದ ನ್ಯೂಝಿಲ್ಯಾಂಡ್ ದೇಶದಲ್ಲಿ ಸಾವಿರಾರು ಕಾಣಿಸದೇ ಇರುವ ಗುಹೆಗಳು ಹುದಿಗಿವೆ. ಆದರೆ ಹೆಸರಾಂತ ಗುಹೆ ಎಂದರೆ “ವೈಟಮೋ” ಕೇವ್ಸ್.
ನಮ್ಮ ಭಾರತ ದೇಶದಲ್ಲಿನ ಗುಹೆಗಳು ಹಲವಾರು. ಅವುಗಳ ಪೈಕಿ ಆಂಧ್ರ ಪ್ರದೇಶದಲ್ಲಿ ಕಾಣ ಬರುವ “ಬೇಲಮ್” ಮತ್ತು “ಬೊರ್ರಾ” ಕೇವ್ಸ್. ಇವುಗಳಿಗೆ ಹೋಲಿಸಿದರೆ ವೈಟಮೋ ಗುಹೆ ದೊಡ್ಡದಲ್ಲ. ಆದರೆ ಈ ಗುಹೆ ನೋಡಲು ಸುಂದರ ಮತ್ತು ಅದ್ಭುತ. ಈ ಸ್ಥಳದಲ್ಲೇ ಅನೇಕ ಗುಹೆಗಳು ಇದ್ದರೂ ತುಂಬಾ ಅಂದವಾದ ಗುಹೆ “ವೈಟಮೋ ಗ್ಲೂ ವರ್ಮ( ಮಿಣುಕು ಹುಳುವಿನ)” ಕೇವ್.
ಈ ಗುಹೆಯಲ್ಲಿ ಜಲ ಮಾರ್ಗ ಇದ್ದು ಎಂಟು ಜನ ಕೂರಬಹುದಾದ ದೋಣಿಯಲ್ಲಿ, ಸುಮಾರು ಮೂವತ್ತು ಅಥವ ನಲವತ್ತು ನಿಮಿಷಗಳ ಕಾಲ ಕರೆದೊಯ್ಯುತ್ತಾರೆ. ಅಪ್ಪಟ ಗಾಢಾಂಧಕಾರ ಮತ್ತು ನಿಶ್ಯಬ್ದ ವಾತಾವರಣದಲ್ಲಿ ನಾವು ದೋಣಿಯಲ್ಲಿ ಸಾಗಬೇಕು. ಹತ್ತರಿಂದ ಹನ್ನೆರೆಡು ಅಡಿ ಎತ್ತರದ ಗುಹೆ. ಫೋಟೋ ತೆಗೆಯುವಹಾಗಿಲ್ಲ. ತಲೆ ಎತ್ತಿ ನೋಡಿದರೆ ಬ್ರಹ್ಮಾಂಡವನ್ನೇ ವೀಕ್ಷಿಸುತ್ತಿರುವ ಅನುಭವ. ಸೊಳ್ಳೆ ಉಪ ಜಾತಿಯ ಮಿಣುಕುವ ಹುಳಗಳು ಒರಟು ಮೇಲ್ಛಾವಣಿಯ ಕಲ್ಲಿನ ಕೊರಕಲಿಗೆ ಅಂಟಿಕೊಂಡಿರುತ್ತವೆ. ಅವುಗಳಿಗೆ ಹಸಿವಿನಿಂದ ಜಠರದ ರಸ ಅತಿ ಹೆಚ್ಚು ಉತ್ಪಾದನೆ ಆದಾಗ ಈ ರಸ ಬೆಳಕನ್ನು ಹೊರಹೊಮ್ಮಿಸುತ್ತೆ. ಆಗ ನಮಗೆ ಲಕ್ಷಾಂತರ ನಕ್ಷತ್ರಗಳನ್ನು ನೋಡಿದ ಹಾಗೆ ಅನುಭವ ಆಗುತ್ತೆ. ಆ ನೋಟ ಒಂದು ಪ್ರಕೃತಿಯ ವಿಸ್ಮಯವೇ ಸರಿ.

ಖಗೋಳಶಾಸ್ತ್ರದಲ್ಲಿ ಆಸಕ್ತಿ ಇರುವ ವ್ಯಕ್ತಿ ಅಮಾವಾಸ್ಯೆಯ ದಿನದಂದು ಹತ್ತಿರದ ಗುಡ್ಡದ ಮೇಲೆ ಕೂತು ಆಕಾಶದ ಕಡೆ ಗಮನ ಇಟ್ಟಾಗ ತಾನು ಎಷ್ಟು ನಕ್ಷತ್ರಗಳನ್ನು ಅಥವ ಮಿನುಗುವ ತಾರೆಗಳನ್ನು ನೋಡಬಹುದು? ಎಣಿಸಲು ಸಾಧ್ಯವೇ? ಇದೇ ತರಹದ ಅನುಭವ ವೈಟಮೋ ಗುಹೆಯಲ್ಲಿ ನಮಗೆ ಆಗಿತ್ತು. ಆದುದರಿಂದ ನನ್ನ ಅಂಕಣದ ಪೀಠಿಕೆ ಈ ತರಹದ ಸಮಾನಾಂತರ ವಿದ್ಯಮಾನಗಳಿಂದ ಕೂಡಿದೆ. ತಂತ್ರಾನುಸಾರ ನಮ್ಮ ಮೆದುಳಿನ ಅರಿವು “ಮಿಯರ್ ರಿಫ್ಲೆಕ್ಷನ್ ಆಫ್ ಯೂನಿವರ್ಸ (ಬ್ರಹ್ಮಾಂಡದ ಪ್ರತಿಫಲನ) ಎಂದು ಕರೆಯಬಹುದು.
ಖಗೋಳಶಾಸ್ತ್ರಜ್ಞರು ಹೇಳಿದಂತೆ “ಮೆದುಳೆಂಬುದು ನಮ್ಮ ಅರಿವಿಗೆ ಬಾರದ ಬೃಹತ್ತಾದ ಕನ್ನಡಿ. ಜೀವಿಗಳ ಪಂಚೇಂದ್ರಿಯಗಳಿಂದ ವಿಶ್ವವನ್ನು ಗ್ರಹಿಸಿ ಬಾಹ್ಯ ಲೋಕದ ಆಯಾಮಗಳಿಗೆ ಪ್ರತಿಫಲಿಸಿದ ಚಿತ್ರಣವನ್ನು ದೂಡಲ್ಪಟ್ಟು ಆ ಜೀವಿಗಳ ಅನುಭೂತಿಯ ಭಾವವೇ ಪ್ರಜ್ಞೆ” ಎಂದು ಹೇಳಬಹುದು. ನಮ್ಮಲ್ಲಿ ಅಡಗಿರುವ ಪ್ರತಿಫಲಕ ಯಂತ್ರಗಳನ್ನು ತಿಳಿಸುವ ಮುಂಚೆ ಶಿಲಾಯುಗದಲ್ಲಿ ವಿಕಸತೆಯ ಮಾನವ ತನ್ನ ಮುಖದ ಪ್ರತಿಫಲನವನ್ನು ನೀರಲ್ಲಿ ನೋಡಿದವನ ಅಥವ ತನ್ನ ಕಣ್ಣಿನಿಂದ ಪ್ರೀತಿಸಿದವಳ ಕಣ್ಣಲ್ಲಿ ಕಣ್ಣಿಟ್ಟು ಪಾರದರ್ಶಕ ಪಟಲದಲ್ಲಿ ಕಂಡನಾ? ಕಾರಣ, ಪ್ರತಿಫಲಕ ಅಥವ ಕನ್ನಡಿಯು ಸುಮಾರು ಎಂಟು ಸಾವಿರ ವರ್ಷಗಳ ಹಿಂದೆ ಅನ್ವೇಷಣೆಗೊಂಡಿದೆ. ಆದುದರಿಂದ ಕನ್ನಡಿಯ ಅನ್ವೇಷಣೆಯ ಮುಂಚೆ ಅವರ ಅವರ ನಿಜವಾದ ಮುಖ ಎಲ್ಲಿ ಕಾಣುತಿತ್ತು? “ತಂತ್ರ” ಧರ್ಮ ಗ್ರಂಥಗಳಲ್ಲಿ ಮಾನವನ ‘ಪ್ರೀತಿ’ ಎಂಬುದು ಕಣ್ಣಲ್ಲಿ ಕಣ್ಣಿಟ್ಟಾಗ ಮಾತ್ರ ಆಗುವ ಸಂಧಾನ.
“ಶಿವ ಮತ್ತು “ಪಾರ್ವತಿ” ಯ ಮಿಥನೋತ್ಸವನ್ನು ‘ಕಾಮ ಕೇಳಿ” ಎನ್ನುವುದಿಲ್ಲ. ಈ ಮಿಲನ ಪವಿತ್ರ ಐಕ್ಯತೆಯ ಸಂಕೇತ ಮತ್ತು ಕುಲ ವೃದ್ಧಿಯ ಪ್ರತಿಪಾದಕ ಯಂತ್ರ. ಮಾನವನ ಮಿಲನ ಕಾರ್ಯ ತಂತ್ರ ಮುಂಭಾಗದ ವಿಧಾನ. ಅದೇ ಜೀವ ಸಂಕುಲದ ಇತರೆ ಸಸ್ತನಿಗಳ ಮಿಲನ ವಿಧಾನ ಹಿಂಬದಿಯಿಂದ. ತಂತ್ರಾನುಸಾರ ಮಾನವನ ಕುಲ ಉದ್ಧಾರದ ವಿಧಾನ ಅತಿ ಶ್ರೇಷ್ಠ ವಿಧಾನ ಎಂಬುದರ ಉಲ್ಲೇಖ ತಂತ್ರ ಗ್ರಂಥಗಳಲ್ಲಿ ತಿಳಿಯಬಹುದು.

ಯಾವಾಗ ಈ ಪ್ರೀತಿ ಅಥವ ಪ್ರೇಮ ವಿಶ್ವದಲ್ಲಿ ಪ್ರೇಮೋತ್ಸವ ಆಗುತ್ತದಯೋ, ಅಂದು ಅದನ್ನು “ವಿಶ್ವ ಪ್ರೇಮ” ಎಂದು ಕರೆಯಲಾಗುತ್ತದೆ. ಕುವೆಂಪು ಅವರ “ವಿಶ್ವ ಮಾನವ” ನ ಕನಸು ವಿಶ್ವ ಪ್ರೇಮದಿಂದ ಮಾತ್ರ ಸಾಧ್ಯ. ತಂತ್ರದ ಸೂತ್ರಾಭಾವ ವಿಶ್ವ ಪ್ರೇಮ, ಸಹಭಾಗಿತ್ವ ಮತ್ತು ಭಾತ್ರುತ್ವ.
ಇಪ್ಪತ್ತನೆಯ ಶತಮಾನದಿಂದ ಹಲವಾರು ಪ್ರಬಲವಾದ ದೂರದರ್ಶಕಗಳನ್ನು ಕಂಡುಹಿಡಿದ ನಂತರ ಗಗನೇತರ ಕಾಯಗಳನ್ನು ವೀಕ್ಷಿಸುವುದು ಬಹಳ ಹೆಚ್ಚಾಗಿದೆ. ಕುತೂಹಲ ದಿನೇ ದಿನೇ ಹೆಚ್ಚುತ್ತಿದೆ. ನೂರಾರು ಬಿಲಿಯನ್ ಲೈಟ್ ಇಯರ್ಸ್ (ಜ್ಯೋತಿರ್ವರ್ಷ) ದೂರದ ನಕ್ಷತ್ರಪುಂಜಗಳನ್ನು, ನಶಿಸುತ್ತಿರುವ ನಕ್ಷತ್ರಗಳನ್ನು, ನೀಲಿ ಗುಳಿಗಳನ್ನು, ಹೊಸ ನಕ್ಷತ್ರಗಳ ಹುಟ್ಟುವಿಕೆಯನ್ನು, ವಿಸ್ತಾರವಾದ ಬ್ರಹ್ಮಾಂಡದ ಧೂಳನ್ನು, ನಕ್ಷತ್ರಗಳಿಗೆ ಸಂಬಂಧಿಸಿದ ವೆತ್ಯಾಸಗಳನ್ನು, ಹಲವಾರು ಗ್ರಹಗಳನ್ನು, ತರತರಹದ ಉಲ್ಕಾಶಿಲೆಗಳನ್ನು, ಅರಿಯದೇ ಇರುವ ಬ್ರಹ್ಮಾಂಡದ ಅನಿಲಗಳನ್ನು ಹೀಗೆ ಹೇಳುತ್ತಾ ಹೋದರೆ ಪುಟಗಳೇ ಸಾಕುವುದಿಲ್ಲ, ಇವುಗಳನ್ನು ನಮ್ಮ ಅತ್ಯಾಧುನಿಕ ದೂರದರ್ಶಕ ಸಹಾಯದಿಂದ ನಾವು ನೋಡಬಹುದಾಗಿದೆ. ಇಲ್ಲಿಯವರೆಗೂ ಯಾವುದೇ ದೂರದರ್ಶಕ ನಮ್ಮ ವಿಶ್ವದ ತುದಿಯನ್ನು ಕಂಡುಕೊಳ್ಳಲು ಸಾಧ್ಯವೇ ಆಗಿಲ್ಲ. ಇಷ್ಟೆಲ್ಲಾ ಘನ ಗ್ರಹಗಳು, ಉಲ್ಕಾ ಕಲ್ಲುಗಳು, ಧೂಮಕೇತುಗಳು ಮತ್ತು ಇತರೆ ಘನವಸ್ತುಗಳನ್ನು ವಿಶ್ವ ತನ್ನ ಆಗಾಧವಾದ ಕಕ್ಷೆಯಲ್ಲಿ ತೇಲುವ ತರಹ ಹೇಗೆ ಹಿಡಿದಿಟ್ಟುಕೊಂಡಿದೆ? ಈ ಪ್ರಶ್ನೆಗೆ ಉತ್ತರ ನಿಗೋಢ ಮತ್ತು ವಿಸ್ಮಯ.

ಕೆಲ ಖಗೋಳಶಾಸ್ತ್ರಜ್ಞರ ಪ್ರಕಾರ ಗುರುತ್ವಾಕರ್ಷಣೆಯ ಬಲದಿಂದ, ವಿದ್ಯುತ್ ಮತ್ತು ಅಯಸ್ಕಾಂತ ಶಕ್ತಿ ಹಾಗು ತಂತಿ ಕಟ್ಟು (string theory) ಸಿದ್ಧಾಂತದಿಂದ ಬ್ರಹ್ಮಾಂಡದ ಕಾಯಗಳು ತಮ್ಮ ತಮ್ಮ ಪಥದಲ್ಲಿ ಸಾಗುತ್ತಿದ್ದಾವೆ ಎಂಬುದು ಇವರುಗಳ ವಾದ. ಹೀಗಿರುವುದರಿಂದ ಮಾನವನ ಮೆದುಳಿನ ಪ್ರಜ್ಞೆಯಲ್ಲಿ ಯಾವ ಯಾವ ಆಯಾಮಗಳ (ಅಂದಾಜು ಹನ್ನೊಂದು ಆಯಾಮಗಳು) ಚಿತ್ರಣಗಳನ್ನು ಅತಿ ಸೂಕ್ಷ್ಮವಾದ (ಬ್ರಹ್ಮಾಂಡ ಹೋಲಿಸಿದಾಗ) ನಮ್ಮ ಕಕ್ಷೆಯಲ್ಲಿ ಅವುಗಳ ಪ್ರಕ್ರಿಯೆಗೆ ಒಳಗಾಗಿಸಬಹುದು?

ಸಮಾನಾಂತರವಾಗಿ ವಿಶ್ಲೇಷಿಸುವುದಾದರೇ ಮೆದುಳಲ್ಲಿ ಟ್ರಿಲಿಯನ್ ಟ್ರಿಲಿಯನ್ ನರ ಕೋಶಗಳು ಇವೆ. ಇಲ್ಲೂ ಸಹ ನರ ಪುಂಜಗಳು, ಕ್ರಿಯಾತ್ಮಕ ಕೇಂದ್ರ ಬಿಂದುಗಳು, ತರ ತರಹದ ಮೆದುಳಿನ ಹಾಲೆ( brain lobes)ಗಳು, ನರ ವಿದ್ಯುತ್ ಸಂಹವನ, ನರ ಸಂಪರ್ಕ ಹೀಗೆ ಇರುವುದರಿಂದ ನಾವು ಬ್ರಹ್ಮಾಂಡದ ಜೊತೆ ನಮ್ಮ ಸೂಕ್ಷ್ಮ ಬ್ರಹ್ಮಾಂಡವನ್ನು ಬೆಸೆಯುತ್ತೇವೆ. ಈ ಪ್ರಕ್ರಿಯೆಗೆ ಶ್ರೀ ಶ್ರೀ ಆದಿ ಶಂಕರಾಚಾರ್ಯರು ತಮ್ಮ ಅದ್ವೈತ ಸಿದ್ಧಾಂತದಲ್ಲಿ “ಅಹಂ ಬ್ರಹ್ಮಾಸ್ಮಿ” ಎಂದು ಉಲ್ಲೇಖಿಸಿದ್ದಾರೆ…
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] […]