ಇಂದಿನ ಭಾರತದಲ್ಲಿ ಶಿಕ್ಷಣ ಎನ್ನುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ಹಳ್ಳಿ-ಹಳ್ಳಿಗಳಲ್ಲಿಯೂ ಪೋಷಕರು ತಮ್ಮ ಹೊಟ್ಟೆ ಬಟ್ಟೆ ಕಟ್ಟಿ, ಹೊಲಗದ್ದೆಗಳನ್ನು ಮಾರಿ ಅಥವಾ ಅಡವಿಟ್ಟು ಮಕ್ಕಳನ್ನು ನಗರಗಳಿಗೆ ಕಳುಹಿಸಿ ಪದವಿ ಕೊಡಿಸುತ್ತಿದ್ದಾರೆ.
ಕೈಯಲ್ಲಿ ಪದವಿ ಪ್ರಮಾಣಪತ್ರ ಹಿಡಿದು ಸಾವಿರಾರು ವಿದ್ಯಾರ್ಥಿಗಳು ಪ್ರತಿ ವರ್ಷ ವಿಶ್ವವಿದ್ಯಾಲಯಗಳಿಂದ ಹೊರಬರುತ್ತಿದ್ದಾರೆ. ಆದರೆ, ಈ ಶೈಕ್ಷಣಿಕ ಬೆಳವಣಿಗೆಯ ಜೊತೆಜೊತೆಗೆ ಉದ್ಯೋಗದ ಮಾರುಕಟ್ಟೆ ಬೆಳೆಯುತ್ತಿಲ್ಲ ಎಂಬುದು ಇಂದಿನ ಕಹಿ ಸತ್ಯ. ಯುವಜನತೆಯ ಪಾಲಿಗೆ ಶಿಕ್ಷಣ ಎನ್ನುವುದು ಜ್ಞಾನದ ದಾರಿಯಾಗುವ ಬದಲು, ಸಾಲದ ಸುಳಿಗೆ ಸಿಲುಕಿಸುವ ಬಲೆಯಾಗಿ ಮಾರ್ಪಟ್ಟಿದೆ. ದೇಶದಲ್ಲಿ ಸುಶಿಕ್ಷಿತ ನಿರುದ್ಯೋಗಿಗಳ ಸಂಖ್ಯೆ ಏರುತ್ತಿರುವುದು ಕೇವಲ ಆರ್ಥಿಕ ಸಮಸ್ಯೆಯಲ್ಲ, ಇದೊಂದು ಸಾಮಾಜಿಕ ದುರಂತವಾಗಿ ಪರಿಣಮಿಸುತ್ತಿದೆ. ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಂದು ಅನಿವಾರ್ಯವಾಗಿ ಸಾಲದ ಮೇಲೆ ನಿಂತಿದೆ. ಇಂಜಿನಿಯರಿಂಗ್, ವಾಣಿಜ್ಯ ಅಥವಾ ಸಾಮಾನ್ಯ ಪದವಿಗಳಿಗೂ ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸಬೇಕಿದೆ.
ರಾಷ್ಟ್ರೀಕೃತ ಬ್ಯಾಂಕುಗಳಿಂದ ಶಿಕ್ಷಣ ಸಾಲ ಪಡೆದು ಪದವಿ ಮುಗಿಸಿದ ಮರುಕ್ಷಣವೇ ಯುವಕರಿಗೆ ಎದುರಾಗುವುದು ಕೆಲಸದ ಆಫರ್ ಲೆಟರ್ ಅಲ್ಲ, ಬದಲಿಗೆ ಬ್ಯಾಂಕಿನ ರಿಕವರಿ ನೋಟಿಸ್ಗಳು. ಪದವಿ ಮುಗಿಸಿ ಹೊರಬರುವ ಯುವಕನಿಗೆ ತನ್ನ ಜ್ಞಾನವನ್ನು ವಿಸ್ತರಿಸುವ ಆಸೆ ಇರುತ್ತದೆ, ಆದರೆ ತಲೆಯ ಮೇಲೆ ಬಿದ್ದಿರುವ ಸಾಲದ ಹೊರೆ ಅವನನ್ನು ಅಸಹಾಯಕನನ್ನಾಗಿ ಮಾಡುತ್ತದೆ.
ಈ ಸಾಲವನ್ನು ತೀರಿಸುವ ಅನಿವಾರ್ಯತೆ ಯುವಕರನ್ನು ತಮಗಿಷ್ಟವಾದ ಕ್ಷೇತ್ರದಲ್ಲಿ ಕೆಲಸ ಹುಡುಕಲು ಬಿಡುವುದಿಲ್ಲ. ತಮ್ಮ ತಾಂತ್ರಿಕ ಕೌಶಲಕ್ಕೆ ಸರಿಹೊಂದುವ ಕೆಲಸ ಸಿಗುವವರೆಗೆ ಕಾಯುವ ಆರ್ಥಿಕ ಚೈತನ್ಯ ಇವರಲ್ಲಿ ಇರುವುದಿಲ್ಲ. ಪರಿಣಾಮವಾಗಿ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಓದಿದ ಯುವಕ ಅನಿವಾರ್ಯವಾಗಿ ಯಾವುದೋ ಡೆಲಿವರಿ ಬಾಯ್ ಕೆಲಸಕ್ಕೋ, ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೋ ಅಥವಾ ಯಾವುದೋ ಸಣ್ಣ ಕಾರ್ಖಾನೆಯ ಕೂಲಿ ಕೆಲಸಕ್ಕೋ ಸೇರಬೇಕಾಗುತ್ತದೆ. ಇಲ್ಲಿ ಕನಸುಗಳಿಗಿಂತ ಹೊಟ್ಟೆಪಾಡು ಮತ್ತು ಸಾಲದ ಕಂತು ತೀರಿಸುವ ಸಂಕಟವೇ ದೊಡ್ಡದಾಗಿದೆ. ಇದರಿಂದಾಗಿ ಬದುಕಿನ ಆರಂಭಿಕ ಹಂತದಲ್ಲೇ ಯುವಕರ ಕ್ರಿಯಾಶೀಲತೆ ಸೊರಗುತ್ತಿದೆ. ಭಾರತೀಯ ಯುವಜನತೆಗೆ ಸರ್ಕಾರಿ ಕೆಲಸ ಎನ್ನುವುದು ಬರೀ ಉದ್ಯೋಗವಲ್ಲ, ಅದೊಂದು ಸಾಮಾಜಿಕ ಭದ್ರತೆ ಮತ್ತು ಗೌರವದ ಸಂಕೇತ. ಆದರೆ ಇಂದು ಸರ್ಕಾರಿ ಉದ್ಯೋಗ ಪಡೆಯುವುದು ಅಕ್ಷರಶಃ ಮರೀಚಿಕೆಯಾಗಿದೆ. ಇದಕ್ಕೆ ಅಭ್ಯರ್ಥಿಗಳ ಅಸಾಮರ್ಥ್ಯ ಕಾರಣವಲ್ಲ, ಬದಲಿಗೆ ಸರ್ಕಾರದ ಆಡಳಿತಾತ್ಮಕ ವಿಳಂಬ ಧೋರಣೆಗಳು ಮುಖ್ಯ ಕಾರಣ. ರೈಲ್ವೆ, ಬ್ಯಾಂಕಿಂಗ್, ಶಿಕ್ಷಣ ಮತ್ತು ಕಂದಾಯ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಬಿದ್ದಿದ್ದರೂ, ಅವುಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿದೆ. ಒಂದು ನೇಮಕಾತಿ ಅಧಿಸೂಚನೆ ಹೊರಬಂದರೆ, ಅದರ ಪರೀಕ್ಷೆ ನಡೆಯಲು ವರ್ಷಗಳೇ ಬೇಕು. ಪರೀಕ್ಷೆ ನಡೆದರೂ ಪ್ರಶ್ನೆ ಪತ್ರಿಕೆ ಸೋರಿಕೆ ಅಥವಾ ಅಕ್ರಮಗಳ ದೂರಿನಿಂದಾಗಿ ನ್ಯಾಯಾಲಯದ ತಡೆಯಾಜ್ಞೆ ಬೀಳುತ್ತದೆ.
ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುವ ಯುವಕರು ಮಾನಸಿಕವಾಗಿ ಜರ್ಜರಿತರಾಗುತ್ತಿದ್ದಾರೆ. 22ನೇ ವಯಸ್ಸಿಗೆ ಕೆಲಸ ಸಿಗಬೇಕಾದ ಯುವಕ 30ರ ಹರೆಯದವರೆಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಲೇ ಇದ್ದಾನೆ. ಈ ವಿಳಂಬವು ಯುವಜನತೆಯಲ್ಲಿ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತಿದೆ. ಪ್ರತಿಭಾವಂತ ಯುವಕರು ತಮ್ಮ ಅಮೂಲ್ಯ ಹರೆಯದ ವರ್ಷಗಳನ್ನು ಗ್ರಂಥಾಲಯದ ನಾಲ್ಕು ಗೋಡೆಗಳ ಮಧ್ಯೆ ಕಳೆಯುವಂತಾಗಿರುವುದು ದೇಶದ ಮಾನವ ಸಂಪನ್ಮೂಲಕ್ಕೆ ಆಗುತ್ತಿರುವ ದೊಡ್ಡ ನಷ್ಟ. ಮತ್ತೊಂದೆಡೆ, ಖಾಸಗಿ ವಲಯದಲ್ಲಿ ತಂತ್ರಜ್ಞಾನದ ನಾಗಾಲೋಟವು ಹೊಸ ಸವಾಲುಗಳನ್ನು ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರೀಕರಣದ ಪ್ರವೇಶದಿಂದಾಗಿ ಸಾಂಪ್ರದಾಯಿಕ ಉದ್ಯೋಗಗಳು ಇಲ್ಲವಾಗುತ್ತಿವೆ. ಕಂಪನಿಗಳು ಇಂದು ಪದವಿಗಿಂತ ಹೆಚ್ಚಾಗಿ ಕೌಶಲ ಮತ್ತು ಅನುಭವವನ್ನು ಹುಡುಕುತ್ತಿವೆ. ಆದರೆ ನಮ್ಮ ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳು ಇಂದಿನ ಆಧುನಿಕ ಉದ್ಯಮಗಳ ಬೇಡಿಕೆಗೆ ತಕ್ಕಂತೆ ಬದಲಾಗಿಲ್ಲ. ಇದರಿಂದಾಗಿ ಪದವೀಧರರು ಇದ್ದಾರೆ, ಆದರೆ ಅವರಿಗೆ ಕೆಲಸ ನೀಡಲು ಕಂಪನಿಗಳು ಸಿದ್ಧರಿಲ್ಲ. ಅರ್ಹ ಅಭ್ಯರ್ಥಿಗಳ ಕೊರತೆ ಎಂಬ ನೆಪವೊಡ್ಡಿ ಕಂಪನಿಗಳು ಇರುವ ಉದ್ಯೋಗಿಗಳ ಮೇಲೆ ಹೆಚ್ಚಿನ ಕೆಲಸದ ಒತ್ತಡ ಹೇರುತ್ತಿವೆ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುತ್ತಿವೆ.
ತಂತ್ರಜ್ಞಾನ ಬೆಳೆದಂತೆ ಉತ್ಪಾದಕತೆ ಹೆಚ್ಚಿರಬಹುದು, ಆದರೆ ಹೊಸಬರಿಗೆ ಉದ್ಯೋಗದ ಬಾಗಿಲುಗಳು ಮುಚ್ಚುತ್ತಿವೆ. ಐಟಿ ಮತ್ತು ಉತ್ಪಾದನಾ ವಲಯಗಳಲ್ಲಿ ನಡೆಯುತ್ತಿರುವ ಉದ್ಯೋಗ ಕಡಿತವು ಪದವಿ ಮುಗಿಸಿ ಹೊರಬರುವ ಯುವಕರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ. ಉದ್ಯೋಗವಿಲ್ಲದ ಯುವಶಕ್ತಿ ದೇಶದ ಆರ್ಥಿಕತೆಗೆ ಹೊರೆಯಾಗುವ ಅಪಾಯವಿದೆ. ನಿರುದ್ಯೋಗದಿಂದ ಉಂಟಾಗುವ ಹತಾಶೆ ಯುವಕರನ್ನು ತಪ್ಪು ದಾರಿಗೆ ಎಳೆಯುವ ಸಾಧ್ಯತೆ ಇರುತ್ತದೆ. ಮಾದಕ ವ್ಯಸನ, ಅಪರಾಧ ಚಟುವಟಿಕೆಗಳು ಮತ್ತು ಮಾನಸಿಕ ಖಿನ್ನತೆಗೆ ನಿರುದ್ಯೋಗವೇ ಪ್ರಮುಖ ಕಾರಣವಾಗುತ್ತಿದೆ. ಹಳ್ಳಿಯಿಂದ ನಗರಕ್ಕೆ ಬಂದ ಯುವಕ ಉದ್ಯೋಗ ಸಿಗದೆ ಅಲ್ಲಿನ ಬದುಕಿಗೆ ಹೊಂದಿಕೊಳ್ಳಲಾರದೆ, ಇತ್ತ ಹಳ್ಳಿಗೂ ಮರಳಲಾರದೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ. ಮದುವೆ, ಸಂಸಾರ ಮತ್ತು ಉತ್ತಮ ಜೀವನದ ಕನಸುಗಳು ನೂರೆಂಟಾದರೂ, ಜೇಬಿನಲ್ಲಿ ಹಣವಿಲ್ಲದ ಕಾರಣ ಯುವಕರು ಜೀವನೋತ್ಸಾಹವನ್ನೇ ಕಳೆದುಕೊಳ್ಳುತ್ತಿದ್ದಾರೆ. ಸಿಕ್ಕ ಕೆಲಸದಲ್ಲಿ ಸಂತೋಷವಾಗಿರುವುದು ಅವರ ಆಯ್ಕೆಯಲ್ಲ, ಅದು ಅನಿವಾರ್ಯತೆ. ಈ ಅನಿವಾರ್ಯತೆಯೇ ಇಂದು ದೇಶದ ಬಹುಪಾಲು ಯುವಕರ ಜೀವನದ ಬಂಡವಾಳವಾಗಿದೆ.
ಸರ್ಕಾರಗಳು ಕೇವಲ ಅಂಕಿ-ಅಂಶಗಳ ಮೇಲೆ ಆಟವಾಡುವುದನ್ನು ಬಿಟ್ಟು, ವಾಸ್ತವದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಿದೆ. ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಮುಗಿಸುವುದು, ಶಿಕ್ಷಣ ಸಾಲದ ಮೇಲಿನ ಬಡ್ಡಿಯನ್ನು ಕಡಿತಗೊಳಿಸುವುದು ಮತ್ತು ಮಾರುಕಟ್ಟೆಗೆ ಪೂರಕವಾದ ಕೌಶಲ ಆಧಾರಿತ ಶಿಕ್ಷಣ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿಸಲು ಸಾಧ್ಯವಿದೆ. ಸ್ವಯಂ ಉದ್ಯೋಗಕ್ಕೆ ಬೇಕಾದ ಆರ್ಥಿಕ ನೆರವು ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಸುಲಭಗೊಳಿಸಬೇಕು. ಯುವಜನತೆಯು ದೇಶದ ಸಂಪತ್ತು; ಆ ಸಂಪತ್ತು ನಿರುದ್ಯೋಗದ ಕಾರಣದಿಂದಾಗಿ ವ್ಯರ್ಥವಾಗಬಾರದು. ನಾವು ಯುವಕರನ್ನು ಕೇವಲ ಮತಬ್ಯಾಂಕ್ ಆಗಿ ನೋಡದೆ, ದೇಶದ ಭವಿಷ್ಯದ ಶಿಲ್ಪಿಗಳನ್ನಾಗಿ ಕಂಡು ಅವರಿಗೆ ಅರ್ಹವಾದ ಕೆಲಸ ಮತ್ತು ಗೌರವದ ಬದುಕು ನೀಡಬೇಕಿದೆ. ಆಗ ಮಾತ್ರ ವಿಕಸಿತ ಭಾರತ ಎಂಬ ಕಲ್ಪನೆಗೆ ಅರ್ಥ ಬರಲು ಸಾಧ್ಯ. ಈ ನಿಟ್ಟಿನಲ್ಲಿ ವ್ಯವಸ್ಥೆ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ಪೀಳಿಗೆ ಕೇವಲ ಪದವಿಗಳ ಚೀಲವನ್ನು ಹೊತ್ತ ನಿರಾಶಾವಾದಿಗಳ ಗುಂಪಾಗಿ ಬದಲಾಗುವುದರಲ್ಲಿ ಸಂಶಯವಿಲ್ಲ.
ಬರಹ: ಮೊಹಮ್ಮದ್ ಅಜರುದ್ದೀನ್ ಅಕ್ಕಿಹೆಬ್ಬಾಳು
