ಹಾಸನ: ಪ್ರತಿಭೆ ಇದ್ದರೆ ಅದನ್ನು ಬೆಳೆಸಿಕೊಳ್ಳಲು ಪರಿಸ್ಥಿತಿಗಳು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಗಾಯಕಿ ಪವಿತ್ರ ಮಹೇಶ್ ಉತ್ತಮ ಉದಾಹರಣೆ. ಹಾಸನ ಜಿಲ್ಲೆಯ ಮೂಲದ ಈ ಪ್ರತಿಭಾವಂತ ಕಲಾವಿದೆ, ತಮ್ಮ ಪರಿಶ್ರಮ ಮತ್ತು ನಿಷ್ಠೆಯಿಂದ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿಕೊಂಡಿದ್ದಾರೆ.
ಹಾಸನದ ಸಂತ ಫಿಲೋಮಿನಾ ಶಾಲೆ ಹಾಗೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಪವಿತ್ರ ಅವರು, ಬಾಲ್ಯದಲ್ಲೇ ಸಂಗೀತದ ಮೇಲೆ ಅಪಾರ ಆಸಕ್ತಿ ಹೊಂದಿದ್ದರು. 10ನೇ ವಯಸ್ಸಿನಿಂದಲೇ ಹಾಡುಗಳತ್ತ ಆಕರ್ಷಿತರಾದ ಅವರು, ಹಾಡುವುದು ಹಾಗೂ ಕೇಳುವುದು ದಿನನಿತ್ಯದ ಭಾಗವಾಗಿಸಿಕೊಂಡಿದ್ದರು. ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಪ್ರತಿಭೆಯನ್ನು ನಿಧಾನವಾಗಿ ರೂಪಿಸಿಕೊಂಡರು.
ನಂತರ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಹೋಬಳಿಯ ಹುಲಿಕೆರೆ ಗ್ರಾಮದ ಮಹೇಶ್ ಅವರೊಂದಿಗೆ ವಿವಾಹವಾದರು. ಮದುವೆಯ ನಂತರವೂ ತಮ್ಮ ಕಲಾತ್ಮಕ ಆಸಕ್ತಿಯನ್ನು ಬಿಡದೇ, ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಾ ಸಂಗೀತವನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡಲಾರಂಭಿಸಿದರು.
ಸಂಗೀತದ ಕ್ಷೇತ್ರದಲ್ಲಿ ಮತ್ತಷ್ಟು ಬೆಳೆಯಬೇಕೆಂಬ ಆಶಯದಿಂದ “ಭಾವಗಾನ ಮ್ಯೂಸಿಕಲ್ ಅಂಡ್ ಜಾನಪದ ಟ್ರಸ್ಟ್ (ರಿ)” ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಸಂಗೀತ ತರಗತಿಗಳನ್ನು ಆರಂಭಿಸಿದ್ದಾರೆ. ಈ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ, ಹೊಸ ಪ್ರತಿಭೆಗಳನ್ನು ಹೊರತರುತ್ತಿದ್ದಾರೆ.

ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಪವಿತ್ರ ಅವರಿಗೆ ತಾಲೂಕು ಆಡಳಿತದಿಂದ ಗಣರಾಜ್ಯೋತ್ಸವದಂದು ತಾಲೂಕು ಪ್ರಶಸ್ತಿ ಲಭಿಸಿದೆ. ಬೆಂಗಳೂರಿನಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ “ಒನಕೆ ಓಬವ್ವ” ಪ್ರಶಸ್ತಿ ಹಾಗೂ ಗಾಯಕ-ಸಂಗೀತ ನಿರ್ದೇಶಕ ಶಶಿಧರ್ ಕೋಟೆ ಅವರಿಂದ “ಕರುನಾಡ ಕಲಾ ಕೇಸರಿ” ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಸುಮಾರು 13 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು, ಸಂಗೀತದ ಜೊತೆಗೆ ಚಿತ್ರಕಲೆ, ವಸ್ತ್ರಾಲಂಕಾರ, ವರ್ಣಲಂಕಾರ ಕಲೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಜೊತೆಗೆ ಡಿಜಿಟಲ್ ಪ್ರಿಂಟಿಂಗ್ ಹಾಗೂ ಫೋಟೋ ಕ್ರಿಯೇಷನ್ ಕ್ಷೇತ್ರದಲ್ಲಿಯೂ ತಮ್ಮದೇ ಆದ ಗುರುತು ಮೂಡಿಸಿದ್ದಾರೆ.
“ನನ್ನ ಜೀವನ ಪಯಣ ಇನ್ನೂ ಮುಂದುವರಿಯುತ್ತಿದೆ. ನನ್ನ ಕಲೆ ಮೂಲಕ ಸಮಾಜದಲ್ಲಿ ಒಂದು ಗುರುತನ್ನು ಮೂಡಿಸುವುದು ನನ್ನ ಗುರಿ. ಕಲೆ ನನ್ನ ಉಸಿರು… ಸಂಗೀತ ನನ್ನ ಬದುಕು,” ಎಂದು ಪವಿತ್ರ ಮಹೇಶ್ ತಮ್ಮ ಭಾವನೆ ಹಂಚಿಕೊಂಡಿದ್ದಾರೆ.
—
ಗೊರೂರು ಅನಂತರಾಜು
ಹಾಸನ
📞 9449462879
ವಿಳಾಸ: ಹುಣಸಿನಕೆರೆ ಬಡಾವಣಿ, 29ನೇ ವಾರ್ಡ್, 3ನೇ ಕ್ರಾಸ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-573201
